ಕೊಳ್ಳೇಗಾಲ: ಬಡವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಬದ್ಧತೆಯೊಂದಿಗೆ ಶ್ರೀ ಚೌಡೇಶ್ವರಿ ವಿದ್ಯಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ಪಟ್ಟಣದ ಶ್ರೀ ಚೌಡೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಚೌಡೇಶ್ವರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ಶಾಲಾ ವರ್ಷದ ವೈಭವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಹೆಚ್ಚಾಗಿ ಬಡ ಮಕ್ಕಳು ಓದುತ್ತಿರುವುದು ವಿಶೇಷವಾಗಿದೆ. ದೇವಾಂಗ ಸಮಾಜಕ್ಕೆ ಸೇರಿದ ಶಾಲೆ ಇದಾಗಿದೆ. ಪ್ರತಿಷ್ಠಿತ ಶಾಲೆಗಳಿಗೆ ಡೊನೆಷನ್, ಶುಲ್ಕ ಕಟ್ಟಿಕೊಂಡು ಓದಲಾಗದ ಬಡ ಕುಟುಂಬಸ್ಥರ ಮಕ್ಕಳು ಈ ಶಾಲೆಯಲ್ಲಿ ಹೆಚ್ಚಾಗಿ ಓದುತ್ತಿದ್ದಾರೆ. ಶಾಲಾ ಶುಲ್ಕ ಕಟ್ಟಲಾಗದ ಮಕ್ಕಳಿಗೆ ಈ ಶಾಲೆಯಲ್ಲಿ ಹಿಂದೆ ಓದಿ ಉನ್ನತ ಸ್ಥಾನದಲ್ಲಿರುವ ಹಳೇ ವಿದ್ಯಾರ್ಥಿಗಳು ನೆರವಾಗುತ್ತಿರುವುದು ಗಮನಾರ್ಹ ಎಂದರು.
ಅದೆಷ್ಟೋ ಮಕ್ಕಳು ಅರ್ಧ ಶುಲ್ಕವನ್ನು ಭರಿಸಿ ವ್ಯಾಸಾಂಗ ಮಾಡಿದ ಉದಾಹರಣೆಗಳಿವೆ ಎಂಬುದನ್ನು ಕೇಳಿದ್ದೇನೆ. ಕೊಳ್ಳೇಗಾಲದಲ್ಲಿ ಬಡವರಿಗೆ ಶಿಕ್ಷಣ ನೀಡುವ ಕೆಲಸವನ್ನು ಈ ಶಾಲೆ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು. ಈ ವೇಳೆ ಕಳೆದ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಶಾಲಾ ಆಡಳಿತ ವರ್ಗದಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ಬಸವರಾಜು, ದೇವಾಂಗ ಮಹಾಜನ ಸಂಘದ ಅಧ್ಯಕ್ಷ ಕೆ.ವೇಣುಗೋಪಾಲ್, ಕಾರ್ಯದರ್ಶಿ ಟಿ.ಎನ್. ನಾರಾಯಣ್, ಸದಸ್ಯ ರಾಜು, ಶ್ರೀ ಅರುಣಾಚಲೇಶ್ವರ ಟ್ರಸ್ಟ್ ಅಧ್ಯಕ್ಷ ಜಿ.ಸುಂದರೇಶ್‌ಕುಮಾರ್, ಕಾರ್ಯದರ್ಶಿ ಎ.ಎನ್.ನಾಗರಾಜಯ್ಯ, ಶಾಲೆಯ ಉಸ್ತುವಾರಿ ಶೆಟ್ಟಿಗಾರರಾದ ಎಂ.ಮುರಳೀಧರ್, ಎಸ್.ವೀರಭದ್ರಯ್ಯ, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ಮತ್ತಿತರಿದ್ದರು.