ಜಿಲ್ಲೆ

ಬಡ ಮಕ್ಕಳಿಗೆ ಫ್ರೀ ಪ್ರವೇಶ ನೀಡಿ

ಬೀದರ್: ಕರೊನಾ ಸೃಷ್ಟಿಸಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಪ್ರಸಕ್ತ ವರ್ಷ ಬಡ ವಿದ್ಯಾರ್ಥಿಗಳ ಶುಲ್ಕ ಕೈಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯವರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಎಲ್ಲ ಮಕ್ಕಳಿಗೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಬೇಕು. ಬಡ ಮಕ್ಕಳಿಗೆ ಶುಲ್ಕವೇ ಪಡೆಯಬಾರದು. ಈ ಸಲ ಯಾವುದೇ ಮಕ್ಕಳಿಂದ ಡೊನೇಶನ್ ತೆಗೆದುಕೊಳ್ಳಬಾರದು. ಕರೊನಾದಿಂದ ಅನೇಕರು ಸಮಸ್ಯೆಗೆ ಸಿಲುಕಿದ್ದಾರೆ. ಬಡ, ಮಧ್ಯಮ ವರ್ಗದ ಜನರು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ. ಕಷ್ಟಕಾಲದಲ್ಲಿ ಅಂಥವರ ಕೈ ಹಿಡಿಯುವುದು ಎಲ್ಲರ ಕರ್ತವ್ಯ. ಇದರ ಭಾಗವಾಗಿ ಬಡ ಮಕ್ಕಳಿಗೆ ಫ್ರೀ ಪ್ರವೇಶ ಕಲ್ಪಿಸಿಕೊಟ್ಟರೆ ಉತ್ತಮ ಎಂದು ಸಲಹೆ ನೀಡಿದರು.
ಸಚಿವರ ಮನವಿಗೆ ಖಾಸಗಿ ಶಿಕ್ಷಣ ಸಂಸ್ಥೆ ಪ್ರಮುಖರಿಂದ ಅಷ್ಟೊಂದು ಉತ್ತಮ ಸ್ಪಂದನೆ ಸಿಗಲಿಲ್ಲ. ಬದಲಿಗೆ ತಾವು ಎದುರಿಸುತ್ತಿರುವಂಥ ಕಷ್ಟಗಳನ್ನು ಸಭೆಯಲ್ಲಿ ಹೇಳಿಕೊಂಡರು. ಬಡ ಮಕ್ಕಳಿಂದ ಈ ವರ್ಷ ಶುಲ್ಕ ಪಡೆಯಬೇಡಿ ಎಂಬ ಸಚಿವರ ವಿನಂತಿಗೆ ಯಾರೂ ಸಹಮತ ವ್ಯಕ್ತಪಡಿಸಲಿಲ್ಲ. ಆದರೆ ಪೋಷಕರಿಗೆ ಯಾವುದೇ ಸಮಸ್ಯೆ ಆಗದಂತೆ ಪ್ರವೇಶ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಬಸವರಾಜ ಭರಶೆಟ್ಟಿ ಮಾತನಾಡಿ, ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಆಥರ್ಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೂ ತಮ್ಮ ಮನವಿಯಂತೆ ಪೋಷಕರಿಗೆ ತೊಂದರೆಯಾಗದ ಹಾಗೆ ಮಕ್ಕಳಿಗೆ ಪ್ರವೇಶ ನೀಡುವುದಾಗಿ ಹೇಳಿದರು. ಜಿಲ್ಲೆಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು ಕರೆಸಿ ಇನ್ನೊಂದು ಸಭೆ ನಡೆಸಿ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಲು ಸೂಚಿಸುವಂತೆ ವಿಜಯಕುಮಾರ ಸೋನಾರೆ ಸಲಹೆ ಮಾಡಿದರು.
ಜಿಲ್ಲಾಧಿಕಾರಿ ರಾಮಚಂದ್ರನ್, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಡಿಡಿಪಿಐ ಎಚ್.ಸಿ. ಚಂದ್ರಶೇಖರ, ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ವಿವಿಧ ಖಾಸಗಿ ಶಾಲೆ ಆಡಳಿತ ಮಂಡಳಿ ಸದಸ್ಯರು, ಮುಖ್ಯಸ್ಥರು ಉಪಸ್ಥಿತರಿದ್ದರು.