ಶಹಾಬಾದ್‌ನಲ್ಲಿ ನಾಯಿ ಕಡಿತದಿಂದ ತೀವ್ರ ಗಾಯಗೊಂಡು ಚಿಕಿತ್ಸೆ ಬಳಿಕ ಗುಣ ಹೊಂದಿರುವ ಶಹಾಬಾದ್ ಶರಣ ನಗರ ಬಾಲಕಿ ದೀಪಾಲಿ ಜತೆ ತಂದೆ ನಾಗರಾಜ. 
ಜಿಲ್ಲೆ

ಬಡ ಬಾಲಕಿ ಬದುಕಿಗೆ ಶ್ವಾನ ಶತ್ರು

ಶಹಾಬಾದ್: ನಗರದಲ್ಲಿ ಶ್ವಾನಗಳ ಉಪಟಳ ಮಿತಿಮೀರಿದ್ದು ಒಂದೆಡೆಯಾದರೆ, ದಾಳಿಯಿಂದ ಗಾಯಗೊಂಡವರ ಚಿಕಿತ್ಸೆಗಾಗಿ ಹಣ ಹೊಂದಿಸಲು ಪಾಲಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆ.7ರಂದು ಶರಣ ನಗರದಲ್ಲಿ ದೀಪಾಲಿ ನಾಗರಾಜ (9) ಮೇಲೆ ನಾಯಿ ದಾಳಿ ಮಾಡಿ ಕಣ್ಣು- ಕಿವಿ ಹಾಗೂ ಕೈಗೆ ಕಚ್ಚಿ ಗಾಯಗೊಳಿಸಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಜಯದೇವ ಹಾಸ್ಪಿಟಲ್‌ಗೆ ಸಾಗಿಸಲಾಗಿತ್ತು. ಇಲ್ಲಿನ ವೈದ್ಯರು ಸುಮಾರು ಎರಡು ಗಂಟೆ ನಂತರ ನಮ್ಮಲ್ಲಿ ಸರ್ಜನ್ ಇಲ್ಲ, ಇಂಜಕ್ಷನ್ ಇಲ್ಲ ಎಂದು ಹೇಳಿ ಬಸವೇಶ್ವರ ಆಸ್ಪತ್ರೆಗೆ ಸಾಗಿಸಿದ್ದರು.

ಬಸವೇಶ್ವರದಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ. ನೇತ್ರಕ್ಕೆ ಹೆಚ್ಚಿನ ಹಾನಿಯಾಗಿದ್ದರಿಂದ ಎರಡು ಬಾರಿ ಶಸ್ತçಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಮೊದಲನೇ ಬಾರಿ ಆಪರೇಷನ್ ಇತರ ವೈದ್ಯಕೀಯ ಖರ್ಚು ಸೇರಿ ಬರೋಬ್ಬರಿ 75 ಸಾವಿರ ರೂ. ಆಗಿದೆ. ಆ.21ರಂದು ನಗರಸಭೆಗೆ ಸಲ್ಲಿಸಿದ್ದ ಬಿಲ್‌ಗಳ ಫೈಲ್ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದು ಪೌರಾಯಕ್ತರು ಹೇಳುತ್ತಿದ್ದಾರೆ. ಸದ್ಯ ಫೈಲ್ ಎಲ್ಲಿ? ಯಾವ ಸ್ಥಿತಿಯಲ್ಲಿದೆ ಎಂಬ ಮಾಹಿತಿಯೂ ಸಿಗುತ್ತಿಲ್ಲ.

ಟ್ರೀಟ್‌ಮೆಂಟ್‌ಗೂ ಮುನ್ನ ನಗರಸಭೆಯಿಂದ 5000 ರೂ. ಹಾಗೂ ಶಾಸಕ ಬಸವರಾಜ ಮತ್ತಿಮಡು 10 ಸಾವಿರ ರೂ. ನೀಡಿದ್ದನ್ನು ಬಿಟ್ಟರೆ ಇನ್ಯಾವುದೂ ಹಣ ಬಂದಿಲ್ಲ. ಇತ್ತೀಚೆಗಷ್ಟೆ ಎರಡನೇ ಆಪರೇಷನ್ ಆಗಿದ್ದು, ಎಲ್ಲ ಸೇರಿ 1.50 ಲಕ್ಷ ರೂ. ಖರ್ಚಾಗಿದೆ. ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ.

ಎರಡು ಆಪರೇಷನ್ ಆದ್ರೂ ಮೊದಲಿನಂತಾಗಿಲ್ಲ: ನಾಯಿ ಕಚ್ಚಿದ್ದರಿಂದ ದೀಪಾಲಿ ನೇತ್ರಕ್ಕೆ ಬಸವೇಶ್ವರ ಆಸ್ಪತ್ರೆ ವೈದ್ಯರು ಎರಡು ಸಲ ಆಪರೇಷನ್ ಮಾಡಿದ್ದರೂ ಮೊದಲಿನಂತೆ ಆಗಿಲ್ಲ. ಸ್ವಲ್ಪ ಧೂಳು ಹೋದರೂ ಕಣ್ಣು ಸಿಕ್ಕಾಪಟ್ಟೆ ನೋವಾಗುತ್ತದೆ. ಸದಾ ಕಪ್ಪು ಕನ್ನಡಕ ಹಾಕಿಕೊಂಡೇ ತಿರುಗಾಡಬೇಕು. ನೋವಾದರೂ ಯಾರ ಮುಂದೆ ಹೇಳದೆ ಒಬ್ಬಳೇ ಅಳುತ್ತ ಕೂರುತ್ತಾಳೆ. ಒಂದು ವರ್ಷದ ಶಾಲೆಯೂ ಹೋಯಿತು. ಒಟ್ಟಿನಲ್ಲಿ ಶ್ವಾನವೊಂದು ಕಂದಮ್ಮ ಹಾಗೂ ಕುಟುಂಬವನ್ನು ನೋವಿನೆಡೆಗೆ ನೂಕಿದೆ.

ವೆಚ್ಚ ಭರಿಸುವುದಾಗಿ ಹೇಳಿ ಮರೆತ್ರು: ಶಹಾಬಾದ್‌ನಲ್ಲಿ ದೀಪಾಲಿ ಮೇಲೆ ನಾಯಿ ದಾಳಿ ಮಾಡಿ ತೀವ್ರ ಗಾಯಗೊಳಿಸಿದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರ ಪರಿಗಣಿಸಿತ್ತು. ಶಾಸಕ ಬಸವರಾಜ ಮತ್ತಿಮಡು ಹಾಗೂ ಡಿಸಿ ಫೌಜಿಯಾ ತರನ್ನುಮ್ ನಿರ್ದೇಶನದಂತೆ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮುನಾವರ್ ದೌಲ್, ತಹಸೀಲ್ದಾರ್ ಜಗದೀಶ ಚೌರ, ಪೌರಾಯುಕ್ತ ಡಾ.ಕೆ. ಗುರುಲಿಂಗಪ್ಪ ಅವರು ದೀಪಾಲಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಅಲ್ಲದೆ ಪ್ರಾಥಮಿಕ ಹಂತದಲ್ಲಿ 5000 ರೂ. ಪರಿಹಾರ ಚೆಕ್ ನೀಡಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಟ್ರೀಟ್‌ಮೆಂಟ್ ಬಿಲ್ ನೀಡಿದರೂ ಇಲ್ಲಿವರೆಗೂ ಹಣ ನೀಡಿಲ್ಲ.

ಚಿನ್ನ ಅಡವಿಟ್ಟು ಮಗಳಿಗೆ ಚಿಕಿತ್ಸೆ: ದೀಪಾಲಿ ತಂದೆ ನಾಗರಾಜ ಲಾರಿ ಚಾಲಕನಾಗಿದ್ದು, ಕಲ್ಲು ಗಣಿಯ ಪರ್ಸಿಗಳನ್ನು ಬೇರೆ ರಾಜ್ಯಕ್ಕೆ ಸಾಗಿಸುತ್ತ ಬಂದ ಹಣದಿಂದಲೇ ಕುಟುಂಬ ಸಾಗಿಸುತ್ತಿದ್ದಾರೆ. ಅಂಗಳದಲ್ಲಿ ಆಟವಾಡುತ್ತಿದ್ದ ದೀಪಾಲಿ ಮೇಲೆ ನಾಯಿ ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಸಾಕಷ್ಟು ಯಾತನೆ ಅನುಭವಿಸುತ್ತಿದ್ದಾರೆ. ಒಂದು ತೊಲ ಬಂಗಾರ ಖಾಸಗಿ ಫೈನಾನ್ಸ್ನಲ್ಲಿ ಅಡವಿಟ್ಟು 80 ಸಾವಿರ ರೂ., ಬೈಕ್ ಮೇಲೆ 40 ಸಾವಿರ ರೂ., ಕೆಲಸ ಮಾಡುವಲ್ಲಿ ಮಾಲೀಕನಿಂದ 10 ಸಾವಿರ ರೂ. ಹಾಗೂ ಮನೆಯಲ್ಲಿದ್ದ ಹಣ ಹೊಂದಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ನಗರಸಭೆ ಸಕಾರಾತ್ಮಕ ಸ್ಪಂದಿಸದ್ದರಿAದ ಮುಂದೇನು ಎಂಬ ಚಿಂತೆ ಕಾಡುತ್ತಿದೆ.

ತರಕಾರಿಗಿಂತ ಮಾಂಸದ ಅಂಗಡಿ ಹೆಚ್ಚು: ಶಹಾಬಾದ್‌ನಲ್ಲಿ ತರಕಾರಿ ಅಂಗಡಿಗಳಿAದ ಮಾಂಸದ ದುಕಾನ್‌ಗಳು ಹೆಚ್ಚಿವೆ. ಸುಮಾರು 20 ವೆಜಿಟೆಬಲ್ ಮಳಿಗೆಗಳಿದ್ದರೆ, 50ಕ್ಕೂ ಹೆಚ್ಚು ಮಾಂಸದ ಅಂಗಡಿಗಳು ತಲೆ ಎತ್ತಿವೆ. ಇದರಲ್ಲಿ ಕೆಲ ಅಧಿಕೃತವಾಗಿದ್ದರೆ, ಹಲವು ಅನಧಿಕೃತ. ಕೆಲವರು ಮನೆಯಲ್ಲೇ ಮಾಂಸ ಮಾರಾಟ ಮಾಡುತ್ತಾರೆ. ಮಾಂಸದ ತ್ಯಾಜ್ಯದ ಸರಿಯಾಗಿ ವಿಲೇವಾರಿ ಮಾಡದೆ ರಸ್ತೆಗೆ ಎಸೆಯುತ್ತಿದ್ದು, ನಾಯಿಗಳು ತಿನ್ನುತ್ತವೆ. ಮಾಂಸದ ತ್ಯಾಜ್ಯ ಸಿಗದಿದ್ದರೆ ಪುಟ್ಟ ಮಕ್ಕಳ ಮೇಲೆ ಎರಗುತ್ತಿವೆ ಎಂಬುದು ಸ್ಥಳೀಯರ ಆರೋಪ.