ಸೋಮವಾರಪೇಟೆ: ಪ್ಲಾಸ್ಟಿಕ್ ಹೊದಿಕೆಯ ಮುರುಕು ಮನೆಯಲ್ಲಿ ಅನೇಕ ದಶಕಗಳ ಕಾಲ ಕಡು ಬಡತನದಲ್ಲೇ ಜೀವನ ನಡೆಸಿದ್ದ ಕುಟುಂಬವೊಂದಕ್ಕೆ ಹೊಸ ಮನೆಯಲ್ಲಿ ವಾಸ ಮಾಡುವ ಕನಸು ನೆರವೇರಿತು.
ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಎಂಬ ಕುಗ್ರಾಮದ ನಿವಾಸಿಗಳಾದ ಉದಿಯಂಡ ಸುಬ್ರಮಣಿ, ಜಾನಕಿ ಕುಟುಂಬಕ್ಕೆ ವಾಸಿಸಲು ಮುಟ್ಲು ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ಶಾಸಕ ಡಾ.ಮಂತರ್‌ಗೌಡ ಹಾಗೂ ಹಿತೈಷಿಗಳು ನಿರ್ಮಿಸಿರುವ ಹೊಸ ಮನೆಯ ಕೀಲಿಯನ್ನು ಮಂತರ್‌ಗೌಡ ಅವರು ತನ್ನ ಹಿತೈಷಿಗಳ ಸಮ್ಮುಖದಲ್ಲಿ ಸೋಮವಾರ ಹಸ್ತಾಂತರಿಸಿದರು.
2024ರ ಮೇ 9ರಂದು ತಮ್ಮ ಮಗಳು ಹತ್ಯೆಯಾದ ದಿನದಿಂದ ಮುರುಕು ಮನೆಯೊಳಗೆ ಕತ್ತಲೆಯಲ್ಲಿ ಕುಳಿತು ರೋದಿಸುತ್ತಿದ್ದ ಪತಿ-ಪತ್ನಿಯನ್ನು ಕಂಡು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ನಿಮ್ಮ ಕುಟುಂಬಕ್ಕೆ ಒಂದು ಸೂರು ನಿರ್ಮಿಸಿಕೊಡುತ್ತೇನೆ ಎಂದು ಭರವಸೆಯೊಂದಿಗೆ ಧೈರ್ಯ ತುಂಬಿದ್ದರು.
ಮನೆಯ ಕೀಲಿಯನ್ನು ಪಡೆದುಕೊಂಡ ಕುಟುಂಬ ಸದಸ್ಯರು ಆನಂದಭಾಷ್ಪದೊಂದಿಗೆ ಕೃತಜ್ಞತೆ ಸಲ್ಲಿಸಿದರು. ಶಾಸಕರು ಮತ್ತು ಮನೆ ನಿರ್ಮಿಸಲು ಸಹಕರಿಸಿದ ವ್ಯಕ್ತಿಗಳನ್ನು ಹೂ, ಹಣ್ಣು ಕೊಟ್ಟು ಸನ್ಮಾನಿಸಿದ ಕುಟುಂಬಸ್ಥರು, ಬಂದಿದ್ದ ಅತಿಥಿಗಳಿಗೆ ಊಟ ಬಡಿಸಿ ಸತ್ಕಾರ ಮಾಡಿದರು.
ಕಳೆದ ವರ್ಷ ಮೇ 9ರಂದು ತನ್ನ ಪ್ರಿಯಕರನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ಹತ್ತನೆಯ ತರಗತಿ ವಿದ್ಯಾರ್ಥಿನಿ ಮೀನಾಳ ಕುಟುಂಬದವರಿಗೆ ವಾಸಿಸಲು ಸರಿಯಾದ ಮನೆ ಇಲ್ಲದೆ ಇರುವುದನ್ನು ಕಣ್ಣಾರೆ ಕಂಡ ಶಾಸಕ ಡಾ.ಮಂತರ್‌ಗೌಡ ಹಾಗೂ ಅವರ ಹಿತೈಷಿಗಳು ಸೇರಿ ಒಂದು ವರ್ಷದ ಅವಧಿಯಲ್ಲಿ ಸ್ವಂತ ಖರ್ಚಿನಲ್ಲಿ ಸುಮಾರು 8 ಲಕ್ಷ ರೂ.ವೆಚ್ಚದಲ್ಲಿ ಹೆಂಚಿನ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಹೊಸ ಮನೆಯನ್ನು ಹಸ್ತಾಂತರಿಸಿದ ಶಾಸಕ ಮಂತರ್‌ಗೌಡ ಮಾತನಾಡಿ, ಮಾನವೀಯ ನೆಲೆಗಟ್ಟಿನಲ್ಲಿ ನಾವು ಮಾಡಲೇಬೇಕಾದ ಕೆಲಸ ಇದಾಗಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಸ್ನೇಹಿತರೊಂದಿಗೆ ಸೇರಿ ಈ ಕೆಲಸವನ್ನು ಮಾಡಿದ್ದೇವೆ. ಮಗಳನ್ನು ಕಳೆದುಕೊಂಡ ಕುಟುಂಬದ ಕಣ್ಣೀರು ಒರೆಸುವ ಪ್ರಯತ್ನವನ್ನು ಮಾಡಿದ್ದೇವೆ. ಈ ಮನೆಯಲ್ಲಿ ನೆಮ್ಮದಿಯಿಂದ ವಾಸಿಸುತ್ತ ನೋವನ್ನು ಮರೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ನೊಂದ ಕುಟುಂಬದ ಕಷ್ಟ-ಸುಖಗಳಿಗೆ ಮುಂದೆಯೂ ಸಹಕಾರ ನೀಡುವ ಭರವಸೆ ನೀಡಿದರು.
ನನ್ನ ಮಗಳು ಮೀನಾ ಕಾಡು ದಾರಿಯಲ್ಲಿ ಸೂರ್ಲಬ್ಬಿ ಶಾಲೆಗೆ ಕಾಲ್ನಡಿಗೆಯಲ್ಲಿ ತೆರಳಿ ಹತ್ತನೆಯ ತರಗತಿ ಪಾಸು ಮಾಡಿದ್ದಳು. ಆದರೆ ಅವಳು ತನ್ನದಲ್ಲದೆ ತಪ್ಪಿನಿಂದ ಪ್ರಾಣ ಕಳೆದುಕೊಂಡಳು ಎಂದು ತಾಯಿ ಜಾನಕಿ ಭಾವುಕರಾದರು. ನಾವು ಬಡವರು, ಗ್ರಾಮದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತದೆ. ಜೀವನಕ್ಕೆ ಕೃಷಿಯನ್ನೇ ನಂಬಿಕೊಂಡಿದ್ದೇವೆ. ಹಣಕಾಸಿನ ಸಮಸ್ಯೆಯಿಂದ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ತಿಗೆ ಹಕ್ಕುಪತ್ರಗಳಿಲ್ಲ. ಸರ್ಕಾರದಿಂದ ಮನೆಯೂ ಸಿಕ್ಕಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಶಾಸಕರಾದ ಮಂತರ್‌ಗೌಡ ಅವರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಅವರ ಸಹಾಯವನ್ನು ನಮ್ಮ ಕುಟುಂಬ ಸದಾಕಾಲ ಸ್ಮರಿಸುತ್ತೇವೆ ಎಂದು ಹೇಳಿದರು.
ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮಾತನಾಡಿ, ಮಗಳ ಕೊಲೆಯಾದ ದಿನದಿಂದ ಇಂದಿನವರೆಗೂ ಇಡೀ ಕುಟಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಶಾಸಕರೊಬ್ಬರು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಜನಪ್ರತಿನಿಧಿಗಳಿಗೆ ಇದೊಂದು ಮಾದರಿಯಾಗಬೇಕು ಎಂದು ಆಶಿಸಿದರು. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕೃಷಿಕರಿದ್ದಾರೆ. ಸರ್ಕಾರದ ಎಲ್ಲ ಯೋಜನೆಗಳು ಇಂತಹ ಗ್ರಾಮಗಳಿಗೆ ಮೊದಲು ಸಿಗಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್. ಪ್ರಮುಖರಾದ ಸುಜು ತಿಮ್ಮಯ್ಯ, ಸೋಮಯ್ಯ, ದೇವಯ್ಯ, ಓಂಕಾರಪ್ಪ, ತೆನ್ನಿರ ಮೈನಾ, ಹಂಸ, ಸುರೇಶ್ ಇದ್ದರು.