ಗದಗ: ಅವರೆಲ್ಲ ಬೇರೆಯವರ ಭವಿಷ್ಯ ಹೇಳುತ್ತ ಅದರಿಂದ ಬಂದ ಹಣದಿಂದಲೇ ಬದುಕಿನ ಬಂಡಿ ಸಾಗಿಸುತ್ತಿದ್ದವರು. ಆದರೆ, ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕರೊನಾ ತಡೆಯಲು ಸರ್ಕಾರ ಘೊಷಿಸಿರುವ ಲಾಕ್ಡೌನ್ನಿಂದ ಅವರ ಭವಿಷ್ಯವೇ ಮಂಕಾಗಿದ್ದು ದುಡಿಮೆ ಇಲ್ಲದೇ ಜೀವನ ನಡೆಸುವುದು ಅವರಿಗೆ ದುಸ್ತರವಾಗಿದೆ.
ಕಳಸಾಪೂರ ರಸ್ತೆಯಲ್ಲಿರುವ ರಾಮನಗರದಲ್ಲಿ ವಾಸಿಸುವ ಸುಡಗಾಡ ಸಿದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ಕಲೆಯ ಮೂಲಕ ಜನರನ್ನು ರಂಜಿಸುತ್ತ ಹೊಟ್ಟೆಪಾಡಿಗೆ ಅಲೆಯುವ ಸಮುದಾಯ ಇದಾಗಿದ್ದು, ಲಾಕ್ಡೌನ್ ಪರಿಣಾಮ ದುಡಿಮೆ ನಿಂತುಹೋಗಿದ್ದರಿಂದ ಕೆಲಸವಿಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಏಪ್ರಿಲ್ ಹಾಗೂ ಮೇ ಎರಡು ಪಡಿತರವನ್ನು ಏಕಕಾಲಕ್ಕೆ ವಿತರಣೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ. ನಗರದ ಹಲವಡೆ ಧಾನ್ಯಗಳ ವಿತರಣೆಯೂ ನಡೆದಿದೆ. ಆದರೆ, ಈ ಸಮುದಾಯದ ಬಹುತೇಕರು ಅಲೆಮಾರಿಗಳಾಗಿದ್ದರಿಂದ ಹಲವರ ಬಳಿ ಸರ್ಕಾರ ನೀಡುವ ಪಡಿತರ ಚೀಟಿಯೂ ಇಲ್ಲ. ಹೀಗಾಗಿ ಯಾರಾದರೂ ಏನಾದರೂ ತಂದು ಕೊಡುತ್ತಾರೆಯೇ ಎಂದು ಮಕ್ಕಳು, ವೃದ್ಧರು, ಹೆಣ್ಣುಮಕ್ಕಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ರಾಮನಗರ ಅಷ್ಟೇ ಅಲ್ಲದೆ, ಅವಳಿನಗರದ ಬಹುತೇಕ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರು ಲಾಕ್ಡೌನ್ನಿಂದ ಬದುಕು ನಡೆಸುವುದು ಕಷ್ಟವಾಗಿದೆ. ಬೆಳಗ್ಗೆಯಿಂದ ದುಡಿದರೆ ಮಾತ್ರ ಸಂಜೆಗೆ ಗಂಜಿ, ಇಲ್ಲದಿದ್ದರೆ ತಣ್ಣೀರೇ ಗತಿ ಎನ್ನುವಂತಹ ನೂರಾರು ಕುಟುಂಬಗಳು ಅವಳಿ ನಗರದಲ್ಲಿವೆ. ಕರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಹೇರಲಾಗಿರುವ ಲಾಕ್ಡೌನ್ ಬಡವರಿಗೆ ಅಕ್ಷರಶಃ ದೊಡ್ಡ ಶಿಕ್ಷೆಯಾಗಿದೆ. ಇಂಥ ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿ ಶೀಘ್ರ ಅಲ್ಲಿನ ನಿವಾಸಿಗಳಿಗೆ ಹಾಲು, ಆಹಾರಧಾನ್ಯಗಳನ್ನು ವಿತರಣೆ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಉಚಿತವಾಗಿ ಹಾಲು, ಕಾಳು-ಕಡಿ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಈವರೆಗೆ ನಮಗೇನೂ ನೀಡಿಲ್ಲ. ಜೋಪಡಿಯಲ್ಲಿರುವವರು. ಮಕ್ಕಳೊಂದಿಗೆ ಬದುಕುವುದಾದರೂ ಹೇಗೆ? |ಮಾರುತೆವ್ವ ಜೋಪಡಿ ನಿವಾಸಿ
ಸರ್ಕಾರದ ಆದೇಶ ಪಾಲಿಸಿ
ಮುಂಡರಗಿ: ಪ್ರತಿಯೊಬ್ಬರೂ ಸರ್ಕಾರದ ಆದೇಶ ಪಾಲಿಸಬೇಕು. ಕರೊನಾ ಹೊಡೆದೋಡಿಸಿ ಉತ್ತಮ ಆರೋಗ್ಯವಂತ ದೇಶವನ್ನಾಗಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಹೇಳಿದರು.
ಬಡವರಿಗೆ, ನಿರಾಶ್ರಿತರಿಗೆ, ಕೂಲಿ ಕಾರ್ವಿುಕರಿಗೆ ಉಚಿತವಾಗಿ ವಿತರಿಸಲು ಕೆಎಂಎಫ್ನಿಂದ ಬಂದಿರುವ ಅರ್ಧ ಲೀಟರ್ನ 1 ಸಾವಿರ ಹಾಲಿನ ಪ್ಯಾಕೆಟ್ಗಳನ್ನು ಭಾನುವಾರ ವಿತರಿಸಿ ಮಾತನಾಡಿದರು. ಸರ್ಕಾರ ಕೆಎಂಎಫ್ನಿಂದ ಸ್ಲಂ ಪ್ರದೇಶಗಳು, ಗುಡಿಸಲು ನಿವಾಸಿ, ನಿರಾಶ್ರಿತರಿಗೆ, ಕೂಲಿ ಕಾರ್ವಿುಕ ಬಡವರಿಗೆ ಉಚಿತವಾಗಿ ಹಾಲು ಪೂರೈಸುತ್ತಿದೆ. ಪುರಸಭೆ ಸಿಬ್ಬಂದಿ ನಿಜವಾದ ಬಡವರಿಗೆ ಈ ಯೋಜನೆ ತಲುಪಿಸಬೇಕು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ತಗಡಿನಮನಿ ಇತರರಿದ್ದರು.
ಹಿರೇಹಂದಿಗೋಳ ದೇವಿ ಜಾತ್ರೆ ರದ್ದು
ಗದಗ: ಕರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್ಡೌನ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ಏ.8 ಮತ್ತು ಏ. 9ರಂದು ನಡೆಯಬೇಕಿದ್ದ ದುರ್ಗಾದೇವಿ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿ.ವಿ. ಪಾಟೀಲ, ಕಾರ್ಯದರ್ಶಿ ಬಿ.ಕೆ. ಆರಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸವಡಿ ಗ್ರಾಮದ ಸಂಗಮೇಶ್ವರ ಜಾತ್ರೆ ರದ್ದು
ರೋಣ: ದೇಶದೆಲ್ಲೆಡೆ ಕರೊನಾ ಮಾಹಾಮಾರಿ ಹಬ್ಬುತ್ತಿದ್ದು, ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಸವಡಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಮಂಜುನಾಥ ಗದಗ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಏ.15 ರಂದು ಜಾತ್ರೆ ನಡೆಯಬೇಕಿತ್ತು. ಆದರೆ, ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ವರ್ಷ ಜಾತ್ರೆ ನಡೆಸದಿರಲು ತೀರ್ವನಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ
ಗದಗ: ಕೋವಿಡ್ 19 ಸಾಂಕ್ರಾಮಿಕ ಸೋಂಕು ತಡೆಗಾಗಿ ಜಿಲ್ಲಾಡಳಿತ ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಲಾಕ್ಡೌನ್ ಅವಧಿಯ ಉಳಿದ ಅವಧಿ ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಜಕುಮಾರ ಖತ್ರಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲೆಯ ಕೋವಿಡ್ 19 ಕುರಿತು ಮಾತನಾಡಿದರು. ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ರಚಿಸಲಾದ ತಂಡಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಹೊರಗಿನವರು ಜಿಲ್ಲೆಗೆ ಪ್ರವೇಶಿಸುವ ಮುನ್ನ ಚೆಕ್ ಪೋಸ್ಟ್ಗಳಲ್ಲಿ ಪರಿಶೀಲನೆ ಸರಿಯಾಗಿ ಆಗಬೇಕು ಎಂದು ಹೇಳಿದರು. ದೆಹಲಿಯ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗಿಯಾದ ಜಿಲ್ಲೆಯ ಹದಿಮೂರು ವರದಿಗಳು ನಕಾರಾತ್ಮಕ ಬಂದಿದ್ದರೂ ಅವರನ್ನು ಕಡ್ಡಾಯವಾಗಿ ನಿಗಾದಲ್ಲಿ ಇಡಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಡಾ.ಆನಂದ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿಮ್್ಸ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ ಸಭೆಯಲ್ಲಿ ಇದ್ದರು.