ಹಾಸನ: ಸಾಮಾಜಿಕ ಜಾಲತಾಣಗಳಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವಾಗ ಹಾಗೂ ಪಾಪ್‌ಅಪ್ ಆಗುವ ಮೆಸೇಜ್‌ಗಳನ್ನು ನೋಡುವಾಗ ಒಂದು ಕ್ಷಣ ಆಲೋಚಿಸಿ, ಕ್ಲಿಕ್ ಮಾಡಬೇಕು. ಅಪರಿಚಿತ ವ್ಯಕ್ತಿಗಳಿಂದ ಮತ್ತು ಸಂಖ್ಯೆಗಳಿಂದ ಬರುವ ಯಾವುದೇ ಮೆಸೇಜುಗಳನ್ನು ಕ್ಲಿಕ್ ಮಾಡದೇ ಬಟನ್ ಒತ್ತು ಮುನ್ನ ಯೋಚಿಸಬೇಕು ಎಂದು ಕೇಂದ್ರ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಪ್ರತಾಪ್ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಿದರು.
ನಗರದ ವಿಜಯ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣಗಳನ್ನು ಹಾಗೂ ಇಂಟರ್ನೆಟ್ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷಿತಾ ಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಸಿಗುವ ಫ್ರೀ ವೈ-ಫೈ ಹಾಗೂ ಬೇರೆಯವರ ಫೋನ್ ಚಾರ್ಜರ್‌ಗಳನ್ನು ಉಪಯೋಗಿಸುವುದರಿಂದ ಸೈಬರ್ ಕ್ರೈಂ ಜಾಲಕ್ಕೆ ಸಿಕ್ಕಿ ಹಾಕಿಕೊಳ್ಳುವ ಅಪಾಯಗಳು ಹೆಚ್ಚು. ಫೋನ್‌ಗಳಲ್ಲಿ ಕೆಲವೊಂದು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರಸ್ತುತ ಭಾರತದಲ್ಲಿ 15ರಿಂದ 24 ವಯೋಮಾನದ ವಿದ್ಯಾರ್ಥಿಗಳು ಅತೀ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಿದ್ದಾರೆ. ರೀಲ್ಸ್ ಗಳನ್ನು ಮಾಡುವುದರಲ್ಲಿ ಹಾಗೂ ನೋಡುವುದರಲ್ಲಿ ಅತಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಶೈಕ್ಷಣಿಕ ವಿಷಯಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಅತಿ ಕಡಿಮೆಯಾಗಿದೆ. ಮಕ್ಕಳು ಫೋನ್‌ಗಳನ್ನು ಬಳಸುವ ಸಂದರ್ಭದಲ್ಲಿ ಪೋಷಕರು ಗಮನ ನೀಡಬೇಕು ಹಾಗೂ ತಮ್ಮೆದುರು ಮಕ್ಕಳು ಫೋನ್‌ಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ತಾವು ಬಳಸುವ ಆಪ್‌ಗಳಿಗೆ ಸ್ಟ್ರಾಂಗ್ ಪಾಸ್ ವರ್ಡ್ ಇಡಬೇಕು ಎಂದು ಸಲಹೆ ನೀಡಿದರು.
ತಾವು ಎಲ್ಲಿಗಾದರೂ ಪ್ರವಾಸಕ್ಕೆಗೆ ಹೋಗಿದ್ದರೆ ಅದರ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಇದರಿಂದ ಅಪರಾಧಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಯಾರಾದರೂ ಯಾವುದಾದರೂ ಸೈಬರ್ ಸಮಸ್ಯೆಗಳಿಗೆ ಒಳಗಾದರೆ ಸಮೀಪದ ಪೊಲೀಸ್ ಠಾಣೆ ದೂರು ನೀಡಬೇಕು. ಇಲ್ಲವೇ 1930 (ಒನ್ ನೇಷನ್ ಒನ್ ನಂಬರ್)ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು ಎಂಬ ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳನ್ನು ಹಾಗೂ ಇಂಟರ್ನೆಟ್ ಬಳಸುವಾಗ ತೆಗೆದುಕೊಳ್ಳಬೇಕಾದ ಸುರಕ್ಷಿತಾ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯ ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ, ಶೈಕ್ಷಣಿಕ ಮುಖ್ಯಸ್ಥರಾದ ಡಾ. ಎಸ್.ಶ್ರೀ ಲಕ್ಷ್ಮೀ, ಪ್ರಾಂಶುಪಾಲ ಕೆ.ಎಸ್. ನಂದೀಶ, ಹಾಗೂ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.