ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೀಳಗಿ ವಿಧಾನಸಭಾ ಮತಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲೆಡೆ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. ಬರೀ ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಆರಂಭಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿದ್ದಾರೆ. ೧.೨೭ ಲಕ್ಷ ಎಕರೆ ನೀರಾವರಿ ಯೋಜನೆ, ಪುನರ್ ವಸತಿ ನಿರ್ಮಾಣ, ಭೂಸ್ವಾದೀನ ಪ್ರಕ್ರಿಯೆ ನಿಂತಿವೆ. ಮಂಜೂರಾದ ಯೋಜನೆಗಳನ್ನು ಕೂಡಲೇ ಆರಂಭಿಸಬೇಕು ಅವರು ಆಗ್ರಹಿಸಿದ ಅವರು, ಬೀಳಗಿ ಶಾಸಕರು ನಿಲ್ಲಿಸಿರುವ ಕೆಲಸಗಳನ್ನು ಹಣ ಪಡೆದು ಕೆಲಸ ಆರಂಭಿಸುತ್ತಿದ್ದಾರೆ. ನಿಷ್ಠಾವಂತ, ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಬೀಳಗಿ ಶಾಸಕರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಯುಕೆಪಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಮೀಸಲಿಟ್ಟಿದ್ದ ಹಣವನ್ನು ಬೇರೆ ಕಾರ್ಯಕ್ಕೆ ಬಳಕೆ ಮಾಡಲು ಮುಂದಾಗಿದೆ. ಇದರಿಂದ ರೈತರಿಗೆ ನಿರಾಸೆ ಆಗಿದೆ. ಘೋಷಣೆ ಮಾಡುವಾಗ ಇಲ್ಲದ ಕಂಡಿಷನ್ ಇದೀಗ ಹಾಕುತ್ತಿದ್ದಾರೆ. ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು ಸರ್ಕಾರ ಮುದ್ರಾಂಕ ಶುಲ್ಕ, ವಿದ್ಯುತ್ ಶುಲ್ಕ್, ಸ್ಟಾಂಪ್ ಡ್ಯೂಟಿ, ಅಬಕಾರಿ ಶುಲ್ಕ್ ಹೆಚ್ಚಳ ಮಾಡಿದೆ. ಇದು ಜನ ಸಾಮಾನ್ಯರಿಗೆ ಹೊರೆ ಆಗುತ್ತಿದೆ ಎಂದು ದೂರಿದರು.
ಲಕ್ಷ್ಮಣ ಸವದಿ ಆರೋಪಕ್ಕೆ ತಿರುಗೇಟು:
ಖಾಸಗಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತೀವೆ ಅಂತ ಸದನದಲ್ಲಿ ಕಾಂಗ್ರೆಸ್ ನಾಯಕ ಲಕ್ಷ್ಮಣ ಸವದಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಾಸಗಿ ಸಕ್ಕರೆ ಕಾರ್ಖಾನೆಗಳ ಪ್ರಮಾಣಿಕತೆಯ ಮಾಹಿತಿ ಕೊರತೆ ಅವರಿಗೆ ಇದೆ. ಸರ್ಕಾರಕ್ಕೆ ನೀಡಿರುವ ಸಲಹೆಗಳನ್ನು ಸ್ವಾಗತಿಸುತ್ತೇನೆ. ಆದರೆ ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುತ್ತಿರುವ ಮೋಸದ ಕುರಿತ ಆರೋಪಗಳು ಯಾರನ್ನು ಕುರಿತಾಗಿ ಆಡಿದ್ದೋ ಗೊತ್ತಿಲ್ಲ. ಆರೋಪ ಮಾಡುವಾಗ ದಾಖಲೆ ನೀಡಿ ಮಾತನಾಡಬೇಕು. ತೂಕದ ಬಗ್ಗೆ ಆರೋಪವಿದ್ದರೇ ಸರ್ಕಾರದ ನೇತೃತ್ವದಲ್ಲಿ ಪರಿಶೀಲನೆ ನಡೆಸಲಿ ಎಂದು ಕಿವಿಮಾತು ಹೇಳಿದರು.
ನಮ್ಮ ಸಕ್ಕರೆ ಕಾರ್ಖಾನೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಬ್ಬಿನ ತೂಕ ನಡೆಯುತ್ತಿದೆ. ಯಾರು ಬೇಕಾದರೂ ಯಾವಾಗ ಬೇಕಾದರೂ ಬಂದು ನೋಡುವ ವ್ಯವಸ್ಥೆ ಇದೆ. ಗಾಳಿಯಲ್ಲಿ ಗುಂಡು ಹಾರಿಸಬಾರದು. ಸತ್ಯಾಂಶ ಇದ್ದರೇ ಸದನದಲ್ಲಿ ಬಿಚ್ಚಿಡಲಿ ಎಂದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡ ಹಾಳಾಗಿದೆ. ಹಿಂದುಗಳಿಗೆ ರಕ್ಷಣೆ ಇಲ್ಲವಾಗಿದೆ. ಕೆಲ ಸಮುದಾಯಗಳಿಗೆ ಮಾತ್ರ ಸಹಾಯ ಮಾಡುತ್ತಿದೆ. ಬಜೆಟ್‌ನಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸೂಕ್ತ ಆದ್ಯತೆ ನೀಡಿಲ್ಲ. ಪಠ್ಯ ಬದಲಾವಣೆ ಕೂಡ ಖಂಡನಾರ್ಹ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ, ಬೀಳಗಿ ಪಪಂ ಅಧ್ಯಕ್ಷ ವಿಠ್ಠಲ ಬಾಗೇವಾಡಿ ಇತರರಿದ್ದರು.