ತರೀಕೆರೆ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಉಪ ವಿಭಾಗೀಯ ಮಟ್ಟದ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಭೆಯಲ್ಲಿ ಎಸಿ ಡಾ. ಕೆ.ಜೆ.ಕಾಂತರಾಜ್ ಮಾತನಾಡಿದರು. ವಿಶ್ವಜಿತ ಮೆಹತಾ, ಡಾ. ಆರ್.ಹಾಲಮೂರ್ತಿರಾವ್, ಡಾ. ಆರ್.ದೇವೇಂದ್ರಪ್ಪ, ರಾಮಚಂದ್ರನಾಯ್ಕ ಇದ್ದರು. 
ಜಿಲ್ಲೆ

ಬಗೆಹರಿಯದ ವಿಷಯ ಸಭಾ ನಡಾವಳಿಯಿಂದ ಕೈಬಿಡಿ

ತರೀಕೆರೆ: ಸಭೆಯಲ್ಲಿ ಬರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕಾನೂನಿನಡಿ ಅವಕಾಶವಿದ್ದರೆ ತಾರ್ಕಿಕ ಅಂತ್ಯಗೊಳಿಸಬೇಕು. ಇಲ್ಲವೇ ವಿಷಯ ಕೈಬಿಡಬೇಕು. ಬಗೆಹರಿಯದ ಸಮಸ್ಯೆಯನ್ನು ಪದೇಪದೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಹೀಗೆ ಪುನರಾವರ್ತನೆಯಾಗುತ್ತಿರುವ ವಿಷಯಗಳನ್ನು ಸಭಾ ನಡಾವಳಿಯಿಂದ ಕೈಬಿಡಿ ಎಂದು ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಲಿಂಗರಾಜ್ ಜಿ.ಕೊಚಾರಿಕ ಅವರಿಗೆ ಎಸಿ ಡಾ. ಕೆ.ಜೆ.ಕಾಂತರಾಜ್ ಸೂಚಿಸಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಉಪ ವಿಭಾಗೀಯ ಮಟ್ಟದ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ತರೀಕೆರೆ ತಾಲೂಕು ದಲಿತ ಮುಖಂಡರು ಮಾತನಾಡಿ, ಎಚ್.ರಂಗಾಪುರ ಸ.ನಂ13ರಲ್ಲಿನ 2.34 ಎಕರೆ ಜಾಗ ಸುಮಾರು 50 ವರ್ಷಗಳಿಂದ ಸ್ಮಶಾನಕ್ಕೆ ಬಳಕೆಯಾಗುತ್ತಿದೆ. ಅತಿ ದೂರ ಮಾತ್ರವಲ್ಲ, ಮೂರು ಕಡೆಯಿಂದ ಭದ್ರಾ ಬಲದಂಡೆ ನಾಲೆ ಆವೃತವಾಗಿರುವ ಪರಿಣಾಮ ಅಂತ್ಯ ಸಂಸ್ಕಾರದ ವೇಳೆ ಸಮಸ್ಯೆಯಾಗುತ್ತಿದೆ. ಗ್ರಾಮ ಸಮೀಪದಲ್ಲೇ ಈ ಜಾಗಕ್ಕೆ ಬದಲಿ ಜಾಗದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಸ್ಯೆ ಆಲಿಸಿದ ಡಾ. ಕೆ.ಜೆ.ಕಾಂತರಾಜ್, ಸ್ಮಶಾನದ ಜಾಗ ಖುದ್ದಾಗಿ ಪರಿಶೀಲಿಸಿದ ವೇಳೆ ಅರಣ್ಯ ವ್ಯಾಪ್ತಿಗೊಳಪಡುತ್ತದೆಂಬುದು ಕಂಡುಬಂದಿದೆ. ಅರಣ್ಯ ಇಲಾಖೆ ಅಂತ್ಯಕ್ರಿಯೆಗೆ ಅಡ್ಡಿಪಡಿಸದ ಕಾರಣ ಪರ್ಯಾಯ ಜಾಗದ ವ್ಯವಸ್ಥೆ ಮಾಡುವವರೆಗೆ ಬಳಕೆ ಮಾಡಿಕೊಳ್ಳಲು ಸೂಚಿಸಿದರು.

ಎನ್.ಆರ್.ಪುರ ದಲಿತ ಸಂಘರ್ಷ ಸಮಿತಿ ಮುಖಂಡರು ಮಾತನಾಡಿ, ಪಟ್ಟಣದ 7ನೇ ವಾರ್ಡ್‌ನ ಅಂಬೇಡ್ಕರ್ ಕಾಲನಿಯಲ್ಲಿ ಅನಾದಿಕಾಲದಿಂದ ಮನೆ ನಿರ್ಮಿಸಿಕೊಂಡಿರುವ ದಲಿತರಿಗೆ ಇ-ಸ್ವತ್ತಿನ ಜತೆ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗದಿರುವುದಷ್ಟೇ ಅಲ್ಲ, ಸರ್ಕಾರದ ವಿವಿಧ ಸವಲತ್ತು ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಭೆ ಗಮನಕ್ಕೆ ತಂದರು.

ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ದಲಿತರು ಮನೆ ನಿರ್ಮಿಸಿಕೊಂಡಿರುವ ಜಾಗಗಳ ಪರಿಶೀಲನೆ ಆಯಾ ಇಲಾಖೆ ಅಧಿಕಾರಿಗಳ ಮೂಲಕ ನಡೆಸಲಾಗಿದೆ. ಈ ಸಂಬಂಧ ವರದಿ ತಯಾರಾಗಿದ್ದು, ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಸಿಗಲಿದೆ ಎಂದರು.

ಪಟ್ಟಣದ ಸುಂದರೇಶ್ ಬಡಾವಣೆಯಲ್ಲಿ ರಸ್ತೆ ಜತೆ ಕೆರೆಯನ್ನೂ ಭೂ ಮಾಫಿಯಾದವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ವಿಷಯ ಕಳೆದ ಮೂರು ಸಭೆಯಲ್ಲಿ ಚರ್ಚೆಯಾದರೂ ಪರಿಹಾರ ಸಿಕ್ಕಿಲ್ಲ. ತಕ್ಷಣವೇ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಆಸ್ತಿ ಕಾಪಾಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಪುರಸಭೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಜಂಟಿ ಸರ್ವೇ ನಡೆಸಲು ದಿನ ನಿಗದಿಗೊಳಿಸಲಾಗಿತ್ತು. ಆದರೆ ನಿರಂತರ ಮಳೆ ಕಾರಣಕ್ಕೆ ಸರ್ವೇ ಮಾಡಲು ಸಾಧ್ಯವಾಗಿಲ್ಲ. ಸದ್ಯದಲ್ಲಿ ಮತ್ತೊಂದು ದಿನ ನಿಗದಿಗೊಳಿಸಿ ತೆರವು ಕಾರ್ಯಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪದ ಸ.ನಂ 19ರಲ್ಲಿ ಕೆಲವರಿಗೆ ಹಂಗಾಮಿ ಸಾಗುವಳಿ ಚೀಟಿ ನೀಡಿದ್ದರೂ, ನಿರ್ದಿಷ್ಟ ಜಾಗದ ಗೊಂದಲದಿಂದ ಕೃಷಿ ಮಾಡಲು ಸಮಸ್ಯೆಯಾಗುತ್ತಿದೆ. ನಿಗದಿತ ಜಾಗದ ನಕ್ಷೆ ತಯಾರಿಸಿ ಕಷಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು. ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಹಂಗಾಮಿ ಸಾಗುವಳಿ ನೀಡಿರುವ ಜಾಗದಲ್ಲಿ ಕಷಿಕರು ಸ್ವಾಧೀನಾನುಭವದಲ್ಲಿ ಇಲ್ಲ. ಜತೆಗೆ ಜಮೀನಿಗೆ ಸಂಬಂಧಿಸಿದ ಅಧಿಕತ ದಾಖಲೆ ಇಲ್ಲದ ಕಾರಣ ಸರ್ವೇ ಮಾಡಿ ಗಡಿ ಗುರುತಿಸುವುದು ಅಸಾಧ್ಯ. ಕಾನೂನಿನಡಿ ಯಾವ ಕ್ರಮಕೈಗೊಳ್ಳಬಹುದು ಎಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಅಜ್ಜಂಪುರ ತಾಲೂಕು ಹೆಬ್ಬೂರಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಕಿಷ್ಕಿಂದೆಯಂಥ ಮನೆಯಲ್ಲಿ ವಾಸಿಸುವಂತಾಗಿದೆ. ರಾತ್ರಿ ವೇಳೆ ಹಿರಿಯರು ಮನೆಯಿಂದ ಹೊರಗಡೆ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮೀಪದ ಹಾಳೂರು ಗ್ರಾಮಠಾಣಾದಲ್ಲಿ ಮನೆ ನಿರ್ಮಿಸಿಕೊಳ್ಳಲು ನಿವೇಶನ ಮಂಜೂರು ಮಾಡಿಕೊಡಬೇಕು ಎಂದು ತರೀಕೆರೆ ತಾಲೂಕು ದಲಿತ ಮುಖಂಡರು ಆಗ್ರಹಿಸಿದರು. ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಹಾಳೂರಿನ ಗ್ರಾಮಠಾಣಾದಲ್ಲಿ ನಿವೇಶನ ಮಂಜೂರಾತಿಗೆ 42 ಅರ್ಜಿ ಬಂದಿರುವುದು ಗೊತ್ತಾಗಿದೆ. ಬಡಾವಣೆ ನಕ್ಷೆ ಕೂಡ ತಯಾರಾಗಿದ್ದು, ಮುಂದಿನ ಸಭೆಯೊಳಗೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.

ತರೀಕೆರೆ ತಹಸೀಲ್ದಾರ್ ವಿಶ್ವಜಿತ ಮೆಹತಾ, ಎನ್.ಆರ್.ಪುರ ತಹಸೀಲ್ದಾರ್ ತನುಜಾ ಸವದತ್ತಿ, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಡಿವೈಎಸ್ಪಿ ಡಾ. ಆರ್.ಹಾಲಮೂರ್ತಿ ರಾವ್, ತರೀಕೆರೆ ತಾಪಂ ಇಒ ಡಾ. ಆರ್.ದೇವೇಂದ್ರಪ್ಪ, ಅಜ್ಜಂಪುರ ತಾಪಂ ಇಒ ಎಂ.ಕೆ.ವಿಜಯಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರನಾಯಕ, ಪಿಎಸ್‌ಐ ನಾಗೇಂದ್ರನಾಯ್ಕ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇತರರಿದ್ದರು.