ಜಿಲ್ಲೆ

ಬಗೆಹರಿಯದ ರಾಗಿ ಖರೀದಿ ಗೊಂದಲ: ತಿಪಟೂರು ತಾಲೂಕು ರೈತರ ಕಷ್ಟ ಕೇಳೋರಿಲ್ಲ

ತಿಪಟೂರು: ಸರ್ಕಾರದ ರಾಗಿ ಖರೀದಿ ಪ್ರಹಸನ 24 ಗಂಟೆಗಳಲ್ಲಿ ಮುಕ್ತಾಯಗೊಂಡಿದ್ದು, ರೈತರ ಗೊಂದಲ ಇನ್ನೂ ಮುಂದುವರಿದೆ.

ಅನ್ನದಾತರಿಗೆ ನೆರವಾಗುವ ಉದ್ದೇಶದಿಂದ ಮತ್ತೊಮ್ಮೆ ಖರೀದಿ ಮಾಡಲಾಗುವುದು ಎಂದಿದ್ದ ಸರ್ಕಾರದ ಭರವಸೆಯಿಂದ ಉತ್ತೇಜಿತರಾಗಿದ್ದ ರೈತರು, ದಲ್ಲಾಳಿಗಳ ಕಾಟದಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಎಪಿಎಂಸಿ ಮಾರುಕಟ್ಟೆ ಆವರಣದ ರಾಗಿ ಖರೀದಿ ಕೇಂದ್ರದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಸಾಲು ನಿಂತಿದ್ದರು.

ಏ.26 ರಿಂದ 29ರವರೆಗೂ ನೋಂದಣಿ ಎನ್ನಲಾಗಿತ್ತು. ಮೊದಲನೇ ದಿನ ಸರ್ವರ್​ ಸಮಸ್ಯೆ ನೆಪದಲ್ಲಿ ಮಧ್ಯಾಹ್ನ 3ಗಂಟೆವರೆಗೂ ನೋಂದಣಿ ಮುಂದೂಡಿದ ಅಧಿಕಾರಿಗಳು, ಸರದಿಯಲ್ಲಿ ಕಾದಿದ್ದವರನ್ನು ನಿರಾಸೆಗೊಳಿಸಬಾರದು ಎಂದು ಮೊದಲನೇ ದಿನ ಅವರಿಂದ ಜಮೀನಿನ ಫೂಟ್​ ಐಡಿ, ಆಧಾರ್​ ಕಾರ್ಡ್​ ಪ್ರತಿ ಮತ್ತು ಮೊಬೈಲ್​ ನಂಬರ್​ ಪಡೆದು ಕಳಿಸಿದ್ದರು. ಇದರ 27ರಂದು ರೈತರ ನೋಂದಣಿ ಪ್ರಕ್ರಿಯೆ ಮುಂದುವರಿದಿದ್ದ ಮಧ್ಯೆ, ಸಂಜೆ 4.30ರಲ್ಲಿ ನೋಂದಣಿ ಸ್ಥಗಿತಗೊಳಿಸಿದ ಅಧಿಕಾರಿಗಳು ಸರ್ಕಾರದ ಆದೇಶದಂತೆ 1.14 ಲಕ್ಷ ಮೆಟ್ರಿಕ್​ ಟನ್​ ರಾಗಿ ಖರೀದಿಯ ಮಿತಿ ಮುಗಿದಿದ್ದು, ಇನ್ನು ಮುಂದೆ ನೋಂದಣಿ ಸಾಧ್ಯವಿಲ್ಲ ಎಂದು ೂಷಿಸಿದರು.

ಆದರೆ ಏ.29ರ ವರೆಗೂ ನೋಂದಣಿ ಇದೆ ಎಂದು ನಂಬಿ ಬಂದಿದ್ದ ರೈತರು ಶುಕ್ರವಾರ ನೋಂದಣಿ ಸಾಧ್ಯವಾಗದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಹಿಂತಿರುಗಿದರು.

ಖರೀದಿ ಅಧಿಕಾರಿಗಳ ಪ್ರಕಾರ 24 ಗಂಟೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ನೋಂದಣಿಯಾಗಿದ್ದು, ಈ ಪೈಕಿ ಜನವರಿ, ೆಬ್ರವರಿಯಲ್ಲಿ ರಾಗಿ ಮಾರಾಟ ಮಾಡಿದ್ದ ರೈತರು, ಮತ್ತು 4 ಎಕರೆಗಿಂತ ಅಧಿಕ ಜಮೀನು ಉಳ್ಳ ದೊಡ್ಡ ಹಿಡುವಳಿದಾರರನ್ನು ಹೊರತುಪಡಿಸಿ, ಅಂತಿಮವಾಗಿ 1781 ಅರ್ಹ ರೈತರಿಂದ (ಕನಿಷ್ಠ 10 ಕ್ವಿಂಟಾಲ್​, ಗರಿಷ್ಠ 20 ಕ್ವಿಂಟಾಲ್​) ರಾಗಿ ಖರೀದಿಸಲು ತೀರ್ಮಾನಿಸಲಾಗಿದ್ದು, ಗೋದಾಮು ವ್ಯವಸ್ಥೆ ಆದ ನಂತರ ಖರೀದಿ ಪ್ರಕ್ರಿಯೆ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುರುವೇಕೆರೆ ತಾಲೂಕಿನಲ್ಲಿ ಅತಿ ಹೆಚ್ಚು, ಅಂದರೆ 1870 ರೈತರು ನೋಂದಾಯಿಸಿಕೊಂಡಿದ್ದು, ತಿಪಟೂರು ಎರಡನೇ ಸ್ಥಾನದಲ್ಲಿದೆ. ಏ.29ರವರೆಗೂ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದರು. ಶುಕ್ರವಾರ ಬಂದರೆ ನೋಂದಣಿ ಮುಗಿದು ಎರಡು ದಿನವಾಯ್ತು ಎನ್ನುತ್ತಾರೆ. ಮೊದಲೇ ಹೇಳಿದ್ದರೆ ಹೇಗೊ ಕಷ್ಟಪಟ್ಟು ಸರದಿಯಲ್ಲಿ ನಿಂತು ನೋಂದಣಿ ಮಾಡಿಸಬಹುದಿತ್ತು. ಕಷ್ಟಪಟ್ಟು ಬೆಳೆದಿರುವ ರಾಗಿಯನ್ನು ದಲ್ಲಾಳಿಗಳು ಹೇಳಿದ ದರಕ್ಕೆ ಮಾರುವ ಸ್ಥಿತಿ ಬಂದಿದೆ. > ರಾಮಲಿಂಗಯ್ಯ, ಬೆಳಗರಹಳ್ಳಿ