ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
ಬಗುರ್‌ಹುಕುಂ ಹೊಸ ಸಮಿತಿಗಳು ರಚನೆಯಾಗದ ಹಿನ್ನೆಲೆಯಲ್ಲಿ ಭೂ ರಹಿತರಿಗೆ ಭೂಮಿ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ. ಅರ್ಜಿಗಳು ಕಚೇರಿಯಲ್ಲೇ ಧೂಳುತಿನ್ನುತ್ತಿದ್ದು, ಭೂಮಿಯ ನಿರೀಕ್ಷೆಯಲ್ಲಿದ್ದ ಲಾನುಭವಿ ರೈತರು ಚಾತಕ ಪಕ್ಷಗಳಂತೆ ಎದುರು ನೋಡುವಂತಾಗಿದೆ.
ಕಳೆದ ಸಾಲಿನಲ್ಲಿ ನಮೂನೆ 53ರ ಅಡಿ 9,327 ಮತ್ತು ನಮೂನೆ 57ರ ಅಡಿ 38,187 ಅರ್ಜಿಗಳು ಸೇರಿ ಒಟ್ಟು 47,514 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 15,846 ಅರ್ಜಿಗಳು ಆನ್‌ಲೈನ್ ಮತ್ತು 22,341 ಅರ್ಜಿಗಳ ಆಫ್‌ಲೈನ್ ಮೂಲಕ ಸಲ್ಲಿಕೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದ್ದರೂ ನಿರೀಕ್ಷೆಗೆ ಅನುಗುಣವಾಗಿ ಅರ್ಜಿಗಳು ಇತ್ಯರ್ಥವಾಗಲಿಲ್ಲ. ಅಸಲಿಗೆ ಬಗುರ್‌ಹುಕುಂ ಹೊಸ ಸಮಿತಿಗಳೇ ರಚನೆಯಾಗಿಲ್ಲ.
ಸಚಿವ ಸಂಪುಟ ವಿಸ್ತರಣೆ, ಉಪ ಚುನಾವಣೆ ಮತ್ತು ಕರೊನಾ ಸೋಂಕಿನ ಹಾವಳಿಯಿಂದಾಗಿ ಸರ್ಕಾರ ಸಮಿತಿಗಳ ರಚನೆ ಕಡೆಗೆ ಗಮನಹರಿಸದಿರುವುದರಿಂದ ಅರ್ಜಿಗಳು ತಾಲೂಕು ಕಚೇರಿಯಲ್ಲೇ ಧೂಳು ತಿನ್ನುತ್ತಿವೆ. ಹಲವು ವರ್ಷಗಳಿಂದ ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಬದುಕಿಗೆ ಆಧಾರವಾಗಿದ್ದ ಸರ್ಕಾರಿ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಹಾಗೂ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ, ಸರ್ಕಾರದ ವಿಳಂಬ ನೀತಿಯಿಂದ ಭೂಮಿ ಹೊಂದುವ ಆಸೆಯೂ ಕಮರುತ್ತಿದೆ.
ಸಮ್ಮಿಶ್ರ ಸರ್ಕಾರದಲ್ಲಿ ವಿಳಂಬ : ಕಳೆದ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಅಸ್ತಿತ್ವದಲ್ಲಿದ್ದ ಶಾಸಕರ ನೇತೃತ್ವದ ಬಗುರ್ ಹುಕುಂ ಸಮಿತಿ ಅರ್ಜಿಗಳ ಪರಿಶೀಲನೆ, ಅನುಮೋದನೆ ಮತ್ತು ಭೂ ಹಂಚಿಕೆ ಹೆಸರಿನಲ್ಲಿ ವಿಳಂಬ ಮಾಡಿದ್ದರಿಂದ ರೈತರು ಕಚೇರಿಗಳಿಗೆ ನಿತ್ಯ ಅಲೆದಾಡಿ ಹೈರಾಣರಾಗಿದ್ದರು. ರಾಜಕೀಯ ಹೈಡ್ರಾಮ ಬಳಿಕ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಿತು, ಆದರೆ ಹೊಸ ಸಮಿತಿ ರಚನೆಯಾಗದೆ ಭೂಮಿ ಪಡೆಯುವ ಕನಸು ಇನ್ನೂ ನನಸಾಗಿಲ್ಲ. ತ್ವರಿತವಾಗಿ ಬಗುರ್ ಹುಕುಂ ಹೊಸ ಸಮಿತಿಗಳನ್ನು ರಚಿಸಿ, ಅರ್ಜಿಗಳನ್ನು ಇತ್ಯರ್ಥಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ.