filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.4265873, 0.36199987);sceneMode: 4;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಬಗರ್‌ಹುಕುಂ ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ: ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಮೆರವಣಿಗೆ ನಡೆಸಿದರು. ಸಾಗುವಳಿದಾರರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಧಿಕ್ಕಾರ ಕೂಗಿದರು. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲೂ ಲಕ್ಷಾಂತರ ಮಂದಿ ಬಡವರು ಸರ್ಕಾರಿ ಗೋಮಾಳ, ಹುಲ್ಲುಬನ್ನಿ, ಅಮೃತ್ ಮಹಲ್ ಕಾವಲ್, ಅರಣ್ಯ ಇನ್ನಿತರೆಡೆಗಳಲ್ಲಿ ಹಲವು ದಶಕಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು, ಅರ್ಜಿ ಸಲ್ಲಿಸಿ, ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಅಂತವರಿಗೆ ತ್ವರಿತವಾಗಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕರ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿಗಾಗಿ ರಚನೆಯಾದ ಸಮಿತಿಗಳು ಕಾಲಕಾಲಕ್ಕೆ ಸಭೆ ನಡೆಸುತ್ತಿಲ್ಲ. ಹೀಗಾಗಿ ಅರ್ಹ ಸಾಗುವಳಿದಾರರನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಹೋರಾಟ ಸಮಿತಿ ಮುಖಂಡರನ್ನು ಒಳಗೊಂಡ ಸಭೆಯನ್ನು ಕರೆಯಬೇಕು. ಅಲ್ಲಿಯ ತೀರ್ಮಾನಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅರಣ್ಯ ಹಾಗೂ ಕಂದಾಯ ಭೂಮಿ ಗೊಂದಲಗಳು ಮುಂದುವರಿದಿದ್ದು, ಜಂಟಿ ಸರ್ವೇ ನಡೆಸುವ ಮೂಲಕ ಸರಿಪಡಿಸಬೇಕು. ಯಾರನ್ನು ಯಾವ ಭೂಮಿಯಿಂದಲೂ ಒಕ್ಕಲೆಬ್ಬಿಸಬಾರದು. ನಗರ ಮಿತಿಯ ನೆಪದಲ್ಲಿ ವಂಚಿಸಬಾರದು. ಅಲ್ಲದೆ, ಸಾಗುವಳಿ ಮಾಡುತ್ತ ಸಲ್ಲಿಸಿರುವ ಯಾವುದೇ ಅರ್ಜಿ ತಿರಸ್ಕರಿಸದೆ, ಒನ್ ಟೈಮ್ ಸೆಟಲ್‌ಮೆಂಟ್ ಮಾದರಿಯಲ್ಲಿ ಅರ್ಹರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾದ್ಯಂತ ವಸತಿ ರಹಿತರು ಅರ್ಜಿ ಸಲ್ಲಿಸಿದ್ದು, ಆ ಎಲ್ಲರಿಗೂ ವಸತಿ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. 94‘ಸಿ’ ಮತ್ತು 94‘ಸಿಸಿ’ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಪುರಸ್ಕರಿಸಬೇಕು ಎಂದು ಕೋರಿದರು.

ಸಮಿತಿ ರಾಜ್ಯ ಸದಸ್ಯ ಕುಮಾರ್ ಸಮತಳ, ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಕಾರ್ಯದರ್ಶಿ ಹನುಮಂತಣ್ಣ, ಈರಜ್ಜ, ಕರಿಯಣ್ಣ, ಸುನಂದಮ್ಮ, ವೆಂಕಟೇಶ್, ನಾಗಣ್ಣ, ಚಂದ್ರಣ್ಣ, ಪುರುಷೋತ್ತಮ್, ವಿಜಯಮ್ಮ, ಗ್ರಾಪಂ ಮಾಜಿ ಸದಸ್ಯ ರಾಮಚಂದ್ರಪ್ಪ ಇತರರಿದ್ದರು.