ಜಿಲ್ಲೆ

ಬಗರ್‌ಹುಕುಂ ಹಕ್ಕುಪತ್ರ ವಿತರಿಸಲು ಕಾಲಾಹರಣವೇಕೆ

ಚಿತ್ರದುರ್ಗ: ಬಗರ್‌ಹುಕುಂ ಸಾಗುವಳಿದಾರರು 20 ವರ್ಷಗಳಿಂದಲೂ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಾಲಾಹರಣ ಮಾಡುತ್ತಿರುವುದೇಕೆ ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಪ್ರಶ್ನಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂಭಾಗ ಬುಧವಾರ ನಡೆದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಳಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನೆಪ ಹೇಳುವುದು ಯಾವ ಸರ್ಕಾರಕ್ಕೂ ಶೋಭೆಯಲ್ಲ. ಸುದೀರ್ಘ ಅವಧಿಯ ಬಗರ್‌ಹುಕುಂ ಸಾಗುವಳಿದಾರರ, ಹೋರಾಟಗಾರರ ತಾಳ್ಮೆ ಕೆಣಕುವುದು ಬೇಡ. ಜೀವನೋಪಾಯಕ್ಕಾಗಿ ಕನಿಷ್ಠ ಎರಡ್ಮೂರು ಎಕರೆಯ ಹಕ್ಕುಪತ್ರ ನೀಡುವುದರಲ್ಲಿ ತಪ್ಪೇನಿಲ್ಲ. ಈ ಕುರಿತು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ, ಸ್ಥಳೀಯ ಶಾಸಕರು ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡಿಸಬೇಕು. ಯಾವ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಇದಕ್ಕೆ ಮುಂದಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಹೊರಕೇರಪ್ಪ ಮಾತನಾಡಿ, ಈವರೆಗೂ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಸುಳ್ಳು ಹೇಳಿಕೊಂಡು
ಸಾಗುವಳಿದಾರರನ್ನು ವಂಚಿಸಿವೆ. ಕಾರ್ಪೊರೇಟ್ ಕಂಪನಿಗಳಿಗೆ ನೂರಾರು ಎಕರೆ ನೀಡುತ್ತಿರುವ ಸರ್ಕಾರ ಬಗರ್‌ಹುಕುಂ ಹಕ್ಕುಪತ್ರ ನೀಡಲು ಏಕೆ ನಿರ್ಲಕ್ಷಿಸುತ್ತಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಸತ್ಯಪ್ಪ ಮಲ್ಲಾಪುರ ಮಾತನಾಡಿ, ಹಕ್ಕುಪತ್ರ ನೀಡಲು ಸರ್ಕಾರ ಅನೇಕ ಕಾನೂನು ತೊಡಕುಗಳನ್ನು ಅಡ್ಡ ತರುತ್ತಿದೆ. ಹೀಗಾಗಿ ರೈತರೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ಸಮಿತಿ ಶೀಘ್ರ ಸಭೆ ಕರೆದು ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಲೇಖಕ ಎಚ್.ಆನಂದ್‌ಕುಮಾರ್, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ, ಲಕ್ಷ್ಮಿಸಾಗರ ರಾಜಣ್ಣ, ರಾಜ್ಯ ಸಮಿತಿ ಅಧ್ಯಕ್ಷ ಕೆ.ಮರಿಯಪ್ಪ, ಹನುಮಂತಪ್ಪ ಗೋನೂರು, ಬಂಗಾರಕ್ಕನಹಳ್ಳಿ ನಾಗಣ್ಣ, ಈರಜ್ಜ, ಮಲ್ಲಿಕಾರ್ಜುನ್, ಸುನಂದಮ್ಮ ಇತರರಿದ್ದರು.