Oplus_0 
ಜಿಲ್ಲೆ

ಬಗರ್ ಹುಕುಂ ಕಾಲಮಿತಿಯೊಳಗೆ ಇತ್ಯರ್ಥವಾಗಲಿ

ಯಳಂದೂರು: ಪರಿಶಿಷ್ಟ ಜಾತಿ, ವರ್ಗ ಹಾಗೂ ಭೂಹೀನ ತಳ ಮುದಾಯದಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣವನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿ ದಲಿತರ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಸಿ.ಪುಟ್ಟಮಲ್ಲಯ್ಯ ಮಾತನಾಡಿ, 70ರ ದಶಕದಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಜಾತಿವಾದಿ, ಅಧಿಕಾರಿಶಾಹಿ ಮಸಲತ್ತಿನಿಂದ ಮತ್ತು ಸರ್ಕಾರದ ಕುತಂತ್ರದಿಂದ ಪಿಡಿಸಿಎಸ್ ಜಮೀನು ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್‌ಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ. ತಿದ್ದುಪಡಿ ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ವರ್ಗದ ಜನಾಂಗಕ್ಕೆ ಸ್ಮಶಾನವಿಲ್ಲ. ಹಾಗಾಗಿ ಸ್ಮಶಾನಕ್ಕೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ದಲಿತರನ್ನು ಅರಣ್ಯ ಭೂಮಿ, ಸಾಮಾಜಿಕ ಅರಣ್ಯೀಕರಣ, ಗೋಮಾಳದ ಜಾಗ ಎಂಬ ನೆಪವೊಡ್ಡಿ ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರದಬ್ಬುವ ಕುತಂತ್ರ ಇದಾಗಿದೆ. ದರಕಾಸ್ತು ಭೂಮಿ ಸಕ್ರಮೀಕರಣ ಸಭೆ ನಡೆಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಶಾಸಕರು, ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನ್ಯಾಯ ದೊರಕಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ತಹಸೀಲ್ದಾರ್ ಎಸ್.ಎಲ್.ನಯನಾಗೆ ಮನವಿ ಪತ್ರ ಸಲ್ಲಿಸಿದರು. ಶಂಕರಮೂರ್ತಿ, ನಾರಾಯಣ, ಮಹದೇವಸ್ವಾಮಿ, ಬಿ.ನಂಜುಂಡಸ್ವಾಮಿ, ಮಾಂಬಳ್ಳಿ ಬಸವರಾಜು, ನಂಜಮ್ಮ, ಶಿವರಾಜ್, ನಾರಾಯಣಸ್ವಾಮಿ, ಜಯರಾಮು, ರವಿ, ಶಿವಯ್ಯ, ಪುಟ್ಟಸ್ವಾಮಿ, ರುದ್ರಯ್ಯ, ಜೆ. ನಾಗರಾಜು, ಪ್ರಸಾದ್, ನಂಜುಂಡಯ್ಯ ಇದ್ದರು.