ಹಾಸನ:ತಾಲೂಕಿನ ಕಸಬಾ ಹೋಬಳಿಯ ಲಕ್ಷ್ಮೀ ಸಾಗರ ಗ್ರಾಮದ ಸರ್ವೆ ನಂಬರ್ 35 ರಲ್ಲಿ ಸರ್ಕಾರದಿಂದ ಮಂಜೂರಾಗಿರುವ ಬಗರ್ ಹುಕಂ ಸಾಗುವಳಿ ಭೂಮಿಯನ್ನು ಸರ್ವೆ ಮಾಡಿ, ಪೋಡಿ ಮಾಡಿಕೊಡುವಂತೆ ಆಗ್ರಹಿಸಿ ಮಂಗಳವಾರ ಕೆಪಿಆರ್‌ಎಸ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ನೊಂದ ಕುಟುಂಬದವರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ 35ರಲ್ಲಿ 26 ಕುಟುಂಬಗಳಿಗೆ ತಲಾ 26 ಗುಂಟೆ ಭೂಮಿಯನ್ನು 1977 ರಲ್ಲಿ ಬಗರ್ ಹುಕುಂ ಸಾಗುವಳಿಯ ಅಧಾರದಲ್ಲಿ ಮಂಜೂರು ಮಾಡಿ ಹಂಗಾಮಿ ಸಾಗುವಳಿ ಚೀಟಿಯನ್ನು ನೀಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಈ ಎಲ್ಲಾ ಕುಟುಂಬಗಳು ಈ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆದು ಸ್ವಾಧೀನಾನುಭವದಲ್ಲಿವೆ. ಪಹಣಿಗಳಲ್ಲೂ ಇವರುಗಳ ಹೆಸರು ಬರುತ್ತಿವೆ ಎಂದು ಹೇಳಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 1997ರಲ್ಲಿ ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ರೈತರು ಸ್ವಾಧೀನದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನು ನೀಡಿದೆ. ಆದರೆ 26 ಕುಟುಂಬಗಳಿಗೆ ಮಂಜೂರಾಗಿದ್ದ ತಲಾ 26 ಗುಂಟೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾದೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೆ ಮಾಡಿ, ಗಡಿಗಳನ್ನು ಗುರುತಿಸಿ, ಹದ್ದುಬಸ್ತ್ ಮೂಲಕ ಪೋಡಿ ಮಾಡಿಕೊಡಬೇಕಾಗಿ ತಮ್ಮಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಸನ ಜಿಲ್ಲಾ ಸಮಿತಿ ಮನವಿ ಮಾಡಿಕೊಳ್ಳುತ್ತದೆ ಎಂದರು.
ಪ್ರತಿಭಟನೆಯಲ್ಲಿ ಲಕ್ಷ್ಮೀಸಾಗರ ಗ್ರಾಮದ ಜಯಲಕ್ಷ್ಮೀ, ರಾಜೇಶ್, ಜಯಮ್ಮ, ಮೂರ್ತಿ, ಶ್ರೀನಿವಾಸ್, ಕೆಪಿಆರ್‌ಎಸ್ ಮುಖಂಡರಾದ ಎಂ.ಜಿ. ಪೃಥ್ವಿ, ಅರವಿಂದ್ ಇತರರು ಉಪಸ್ಥಿತರಿದ್ದರು.