ಜಿಲ್ಲೆ

ಬಕ್ರೀದ್ ನಿಮಿತ್ತ ಶಾಂತಿ ಸಭೆ: ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಡಿಸಿ ಫೌಜಿಯಾ ತಾಕೀತು

ಕಲಬುರಗಿ,: ಇದೆ 29 ರಂದು ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಜೊತೆಗೆ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಬಿ.ಫೌಜಿಯಾ ತರನ್ನುಮ್ ಹೇಳಿದರು.

ಸೋಮವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಜರುಗಿದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬ ಶಾಂತಿಯುತವಾಗಿ ಜರುಗಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧೀಕಾರಿಗಳಿಗೆ ಸೂಚಿಸಿದರು.

ಕಲಬುರಗಿ ಮಹಾನಗರ ಮತ್ತು ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲಿ ಪ್ರತ್ಯೇಕ ಸ್ಥಳದಲ್ಲಿ ತ್ಯಾಜ್ಯ ಮಾಂಸ ವೈಜ್ಞಾನಿಕ ವಿಲೇವಾರಿ ಮಾಡಬೇಕು. ತ್ಯಾಜ್ಯ ವಿಲೇವಾರಿ ಮತ್ತು ಮಾಂಸ ಮಾರಾಟ ಅಂಗಡಿಗಳು ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಗೂ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಚೆಕ ಪೋಸ್ಟ್‍ಗಳಲ್ಲಿ ಅಕ್ರಮ ಗೋವು/ ಒಂಟೆ ಸಾಗಾಣಿಕೆ ಮತ್ತು ವಧೆ ತಡೆಗಟ್ಟುವ ನಿಟ್ಟಿನಲ್ಲಿ ನಿಯೋಜನೆಗೊಂಡ ಪಶು ವೈದ್ಯರ ತಂಡ 24 ಗಂಟೆ ಕಾಲ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ, ಕಲಬುರಗಿ ನಗರ ವ್ಯಾಪ್ತಿಯಲ್ಲಿ ಹಬ್ಬದ ದಿನದಂದು ಮನೆಯಿಂದಲೆ ಮಾಂಸ ತ್ಯಾಜ್ಯ ಸಂಗ್ರಹಣೆಗೆ ಹೆಚ್ಚುವರಿಯಾಗಿ 196 ಕಾರ್ಮಿಕರನ್ನು 3 ದಿನಗಳ ಮಟ್ಟಿಗೆ ಸೇವೆ ಪಡೆಯಲಾಗಿದೆ. ಮಾಂಸ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸ್ಥಳ ಗುರುತಿಸಿದ್ದು, ಅಲ್ಲಿಯೇ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುಳ್ಳು ಸುದ್ದಿ ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡಿ:

ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ಮಾತನಾಡಿ, ಕೆಲವು ಸಮಾಜ ವಿರೋಧಿ ಗುಂಪುಗಳು ಅನಗತ್ಯ ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡುವುದುಂಟು. ಇಂತಹ ಪೋಸ್ಟ್ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಅದರ ಸತ್ಯಾಸತ್ಯತೆ ತಿಳಿಯದೆ ಅನಗತ್ಯ ಫಾರ್ವಾಡ್ ಮಾಡಬಾರದು. ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

11 ಪಶು ವೈದ್ಯರ ತಂಡ ರಚನೆ:

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ಬಕ್ರೀದ್ ಹಬ್ಬ ಹಿನ್ನಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮ ಕುರಿತು ವಿವರಿಸುತ್ತಾ, ಅಕ್ರಮವಾಗಿ ಒಂಟೆ ಮತ್ತು ಗೋವುಗಳ ಸಾಗಾಣಿಕೆ ಮತ್ತು ವಧೆ ತಡೆಗಟ್ಟಲು ಜಿಲ್ಲೆಯಾದ್ಯಂತ ತಾಲೂಕುವಾರು 11 ತಂಡ ರಚಿಸಿದ್ದು, 47 ಪಶು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಭೆಗೆ ತಿಳಿಸಿದರು.

ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಿಧಿ ಸೇರಿದಂತೆ ಪಶುಸಂಗೋಪನೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.