ಹುಲಸೂರು: ಬೇಲೂರ ಹಾಗೂ ಬೇಟ್‌ಬಾಲಕುಂದಾ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಬಂದಿದೆ ಎಂದು ಶನಿವಾರ ಸಂಜೆ ವದಂತಿ ಹರಡಿದ್ದು, ರೈತರು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತು.
ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ತಡ ರಾತ್ರಿವರೆಗೆ ಪರಿಶೀಲಿಸಿದರು. ಭಾನುವಾರ ಬೆಳಗ್ಗೆಯೂ ಪ್ರಾಣಿಯ ಹೆಜ್ಜೆ ಗುರುತು ಪರಿಶೀಲಿಸಿದ್ದು, ಹೈನಾ ಪ್ರಾಣಿಯದ್ದು ಎಂಬುದು ಪತ್ತೆಯಾಗಿದೆ.
ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಹೈನಾ ಸತ್ತ ಪ್ರಾಣಿ, ಪಕ್ಷಿಗಳನ್ನು ತಿನ್ನುತ್ತದೆ. ರಾತ್ರಿ ವೇಳೆಯಲ್ಲಿ ಮಾತ್ರ ಓಡಾಡುತ್ತದೆ. ಇದರಿಂದ ಮನುಷ್ಯರಿಗೆ ಅಪಾಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿದ್ದರಿಂದ ಜನರು ನಿಟ್ಟುಸಿರು ಬಿಟ್ಟರು.
ಅರಣ್ಯ ಇಲಾಖೆ ಅಧಿಕಾರಿಗಳು ಬೇಲೂರು, ಬೇಟ್‌ಬಾಲಕುಂದಾ ಹಾಗೂ ಮುಸ್ತಾಪುರ ಗ್ರಾಮದ ಶಿವಾರದ ಹೊಲಗಳಲ್ಲಿ ಪ್ರಾಣಿಗಳ ಹೆಜ್ಜೆ ಗುರುತು ಪರಿಶೀಲಿಸಿದರು. ಚುಳಕಿ ನಾಲಾ ಜಲಾಶಯದ ಕೆಳಭಾಗದಲ್ಲಿ ನೀರಿನ ಅಂಶ ಹಾಗೂ ದಟ್ಟವಾದ ಪೊದೆ ಇರುವುದರಿಂದ ಪ್ರಾಣಿಗಳು ಓಡಾಡುವುದು ಸಹಜ. ಹೈನಾ ರಾತ್ರಿ ಮಾತ್ರ ಓಡಾಡುತ್ತದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಸಂತೋಷ ಯಾಚೆ ತಿಳಿಸಿದ್ದಾರೆ.
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಐಶ್ವರ್ಯ ಗೊಬ್ಬೂರ, ಉಪವಲಯ ಅರಣ್ಯ ಇಲಾಖೆ ಅಧಿಕಾರಿ ಸಂತೋಷ ಯಾಚೆ, ನಿಸಾರ್, ಸಿಬ್ಬಂದಿ ಮಹೇಶ, ಸಂಜುಕುಮಾರ ಅಂತೆಪ್ಪ ಇತರರಿದ್ದರು.