ಜಿಲ್ಲೆ

ಬಂದಿ ನಿವಾಸಿಗಳು ಉತ್ತಮ ಜೀವನ ರೂಪಿಸಿಕೊಳ್ಳಿ; ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಕರೆ

ಹಾಸನ: ಜಿಲ್ಲಾ ಕಾರಾಗೃಹದ ಬಂದಿ ನಿವಾಸಿಗಳು ವೃತ್ತಿ ತರಬೇತಿ ಪಡೆದು ಕೌಶಲಭರಿತರಾಗಿ ಉತ್ತಮ ನಡವಳಿಕೆಯಿಂದ ಕಾರಾಗೃಹದಿಂದ ಬಿಡುಗಡೆ ಹೊಂದಿದ ನಂತರ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಹಾಗೂ ಜಿಲ್ಲಾ ಕೌಶಲಾಭಿವೃದ್ದಿ ಸಹಯೋಗದಲ್ಲಿ ಬುಧವಾರ ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಿದ್ದ ವೃತ್ತಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂದಿ ನಿವಾಸಿಗಳು ತಯಾರಿಸುವ ಪೇಪರ್ ಬ್ಯಾಗ್‌ಗಳಿಗೆ ಪ್ರತ್ಯೇಕ ಬ್ರಾಂಡಿಂಗ್ ನೀಡುವುದರೊಂದಿಗೆ ಬಂದಿ ನಿವಾಸಿಗಳು ಆರ್ಥಿಕವಾಗಿ ಸಬಲರಾಗಲು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ, ವೈಯಕ್ತಿಕ ಸ್ವಾತಂತ್ರ್ಯದ ಮಹತ್ವ ಮತ್ತು ಸಮಾಜದಲ್ಲಿ ಮತ್ತೋರ್ವರಿಗೆ ತೊಂದರೆಯಾಗದ ರೀತಿ ಕಾನೂನಿನಡಿಯಲ್ಲಿ ಜೀವನ ನಡೆಸುವ ವಿಧಾನ ಹಾಗೂ ಕಾರಾಗೃಹದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕುವುದರ ಕುರಿತು ತಿಳಿಸಿದರು.

ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾದ ಬಿ.ಆರ್. ಉದಯಕುಮಾರ್ ಅವರು ಮಾತನಾಡಿ, ಬಂದಿ ನಿವಾಸಿಗಳು ಬಸವಣ್ಣನವರ ವಚನಗಳ ಸಾರಾಂಶ ತಿಳಿದುಕೊಂಡು ಉತ್ತಮ ಮಾರ್ಗದಲ್ಲಿ ನಡೆಯುವುದರ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರಮೇಶ್, ಜಿಲ್ಲಾ ಕಾರಾಗೃಹದ ಪ್ರಭಾರಿ ಅಧೀಕ್ಷಕ ಅನಿಲ್‌ಕುಮಾರ ಈ ಬಡಿಗೇರ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.