ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿ ಬಂದಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಚಿರತೆ ರೈತನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಈ ಭಾಗದ ಜನರಲ್ಲಿ ಆತಂಕ ಉಂಟಾಗಿದೆ.
ಬಂದಳ್ಳಿ ಗ್ರಾಮದ ರೈತ ಕೇಶವಶೆಟ್ಟಿ ತಮ್ಮ ತೋಟಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ ಮಾಡಿದ್ದು, ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಸಂದರ್ಭ ಕೇಶವಶೆಟ್ಟಿ ಜೋರಾಗಿ ಕಿರುಚಿಕೊಂಡಿದ್ದರಿಂದ ಚಿರತೆ ಸ್ಥಳದಿಂದ ಪರಾರಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಗಾಯಗೊಂಡ ಕೇಶವಶೆಟ್ಟಿ ಅವರಿಗೆ ತಾಲೂಕಿನ ಬಿಕ್ಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಕೊಡಿಸಿದ್ದಾರೆ.