ಕಾರವಾರ: ಕರೊನಾ ವೈರಸ್ ಹರಡದಂತೆ ತಡೆಯಲು ಬಂದರು ಹಾಗೂ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಸೂಚಿಸಿದರು.
ಕರೊನಾ ಸೋಂಕು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾಧಿಸಿ ಕರೊನಾ ಸೋಂಕು ಜಿಲ್ಲೆಗೆ ಯಾವುದೇ ಮಾರ್ಗದಲ್ಲಿ ಕಾಲಿಡದಂತೆ ಕಟ್ಟೆಚ್ಚರ ವಹಿಸಬೇಕು. ಕಾರವಾರ ಬಂದರಿಗೆ ಹಡಗುಗಳಲ್ಲಿ ಬರುವವರ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ನಡೆಸಬೇಕು. ಡಿಎಚ್ಒ ಪ್ರತಿ ದಿನ ಇದರ ಮಾಹಿತಿ ಪಡೆದು ರಾಜ್ಯ ಸರ್ಕಾರಕ್ಕೆ ಕಳಿಸಬೇಕು ಎಂದರು.
ಭಾರತೀಯ ನೌಕಾಸೇನೆಗೆ ಸೇರಿದ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯವಿದ್ದು, ಕರೊನಾ ತಡೆಗೆ ಜಿಲ್ಲಾ ಆಸ್ಪತ್ರೆಗೆ 100 ಹಾಸಿಗೆ ನೀಡಲು ಸಿದ್ಧ. ವಿದೇಶದಿಂದ ಬರುವ ಹಡಗುಗಳು ಹಾಗೂ ಅದರಲ್ಲಿರುವ ನಾವಿಕರ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದು ನೌಕಾನೆಲೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಎಸ್ಪಿ ಶಿವ ಪ್ರಕಾಶ ದೇವರಾಜು ಮಾತನಾಡಿ, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ತಪಾಸಣೆ ಕೈಗೊಳ್ಳಲಾಗುವುದು ಎಂದರು.
ಜಿಪಂ ಸಿಇಒ ಎಂ. ರೋಶನ್, ಡಿಎಚ್ಒ ಡಾ. ಜಿ.ಎನ್. ಅಶೋಕ ಕುಮಾರ್, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್, ಶಿಕ್ಷಣಾಧಿಕಾರಿ ಎನ್.ಜಿ. ನಾಯಕ ಇದ್ದರು.
ಹಳಿಯಾಳ, ಜೊಯಿಡಾ, ದಾಂಡೇಲಿಯಲ್ಲಿ ಜಾಗೃತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾಂಡೇಲಿ- ಹಳಿಯಾಳ-ಜೊಯಿಡಾ ಸರ್ಕಾರಿ ಆಸ್ಪತ್ರೆ ಹಾಗೂ ತಹಸೀಲ್ದಾರ್ ಕಚೇರಿ ವತಿಯಿಂದ ಕರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಳಿಯಾಳ ತಾಲೂಕು ಆರೋಗ್ಯಾಧಿಕಾರಿ ಡಾ. ರಮೇಶ, ನೋಡಲ್ ಅಧಿಕಾರಿ ಡಾ. ಮಹಾಬಳೇಶ್ವರ ಹೆಗಡೆ, ಕಾರವಾರದ ಸರ್ವೆಕ್ಷಣಾಧಿಕಾರಿ ಡಾ. ವಿನೋದ ಬೂತೆ, ತಹಸೀಲ್ದಾರ್ ಶೈಲೇಶ ಪರಮಾನಂದ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗುರುವಾರದಿಂದ ‘ಕರೋನಾ ಬಗ್ಗೆ ಭಯಬೇಡ, ಎಚ್ಚರಿಕೆ ಇರಲಿ’ ಎಂಬ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದೆ. ಸಹಾಯಕ್ಕಾಗಿ ದೂರವಾಣಿ ಸಂಖ್ಯೆ, ದಾಂಡೇಲಿ-08284-231330, ಹಳಿಯಾಳ-08284-220165, ಜೊಯಿಡಾ-08383-282703, ಜಿಲ್ಲಾ ಉಚಿತ ಆರೋಗ್ಯ ಸಹಾಯವಾಣಿ-104ಗೆ ಕರೆ ಮಾಡಬಹುದು ಎಂದು ಡಾ. ರಮೇಶ ಕದಂ ತಿಳಿಸಿದ್ದಾರೆ.
ಗೋಕರ್ಣದಲ್ಲಿ ಸಮೀಕ್ಷೆ ಇಂದು: ಕರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮಾ. 6ರಂದು ಆರೋಗ್ಯ ಇಲಾಖೆಯಿಂದ ಗೋಕರ್ಣ ಭಾಗದಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಬೀಚ್, ವಸತಿಗೃಹ ಹಾಗೂ ಮನೆಗಳಲ್ಲಿ ವಾಸವಾಗಿರುವ ವಿದೇಶಿಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿಯಾಗಿ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ವಿಸõತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಸಮೀಕ್ಷೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕಕುಮಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಸ್ಥಳೀಯ ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಕುಮಟಾ ತಾಲೂಕಿನ ಆರೋಗ್ಯ ಇಲಾಖೆಯ ಅಂದಾಜು 40 ಸಿಬ್ಬಂದಿ ಭಾಗವಹಿಸಲಿದ್ದಾರೆ. ಸಮೀಕ್ಷೆ ಕುರಿತು ಬೇರೆ ಬೇರೆ ತಂಡ ರಚಿಸಲಾಗಿದೆ ಎಂದು ಡಾ. ಜಗದೀಶ ನಾಯ್ಕ ತಿಳಿಸಿದ್ದಾರೆ. ಮಹಾಶಿವರಾತ್ರಿ ಜಾತ್ರೆ ಸಮಯದಲ್ಲಿ ಅಂದಾಜು 2 ಸಾವಿರ ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಅವರಲ್ಲಿ ಹೆಚ್ಚಿನವರು ವಾಪಸಾಗಿದ್ದು, ಸದ್ಯ ಇಲ್ಲಿರುವ ವಿದೇಶಿಯರ ನಿಖರ ಸಂಖ್ಯೆ ತಿಳಿದು ಬಂದಿಲ್ಲ. ಆದರೆ, ಗೋಕರ್ಣಕ್ಕೆ ಆಗಮಿಸಿದ ವಿದೇಶಿಯರು ಕರೊನಾ ಭೀತಿ ಆವರಿಸುವ ಮುನ್ನವೇ ಇಲ್ಲಿಗೆ ಬಂದವರಾಗಿದ್ದು, ಜತೆಗೆ ಅವರನ್ನೆಲ್ಲ ವಿಮಾನ ನಿಲ್ದಾಣದಲ್ಲಿ ಪೂರ್ಣ ತನಿಖೆಗೆ ಒಳಪಡಿಸಿರುವ ಹಿನ್ನೆಲೆಯಲ್ಲಿ ಯಾವುದೇ ಆತಂಕ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ.
ಗೋಕರ್ಣ ಹಾಗೂ ಮುಂಡಗೋಡಿನ ಟಿಬೇಟಿಯನ್ ಕಾಲನಿಯಲ್ಲಿ ಮನೆ ಮನೆ ಸರ್ವೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಮಾ. 6ರಿಂದ ಪ್ರಾರಂಭಿಸಲಾಗುವುದು. ಗೋಕರ್ಣದಲ್ಲಿ 37 ಹಾಗೂ ಟಿಬೇಟಿಯನ್ ಕಾಲನಿಯಲ್ಲಿ 16 ತಂಡಗಳು ಕಾರ್ಯ ನಿರ್ವಹಿಸಲಿವೆ. ಉಳಿದಂತೆ ಜಿಲ್ಲೆಯಲ್ಲಿ ವಿದೇಶಕ್ಕೆ ಹೋಗಿ ಬಂದವರ ಬಗ್ಗೆ ನಿಗಾ ಇಡಲಾಗುವುದು. | ಡಾ. ಹರೀಶ ಕುಮಾರ ಜಿಲ್ಲಾಧಿಕಾರಿ
================
ಬಡವರಿಗೆ