ಪಾವಗಡ:- ತಾಲೂಕಿನ ತಿರುಮಣಿ ಸಮೀಪ ಸೋಲಾರ್ ಪಾರ್ಕ್ ನಿಮಾರ್ಣ ಪ್ರದೇಶದಲ್ಲಿ ಬಂಡೆ ಬ್ಲಾಸ್ಟ್ ಆಗಿ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭಿರವಾಗಿದೆ. ರಾಯಚೂರು ಮೂಲದ ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ಅಚ್ಚಮ್ಮನಹಳ್ಳಿಯ ಶಿವಯ್ಯ ಗಾಯಗೊಂಡಿದ್ದಾರೆ.
ಕೆಎಸ್ಪಿಡಿಸಿಎಲ್ನಿಂದ 1,002 ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿಮಾರ್ಣ ಜವಾಬ್ದಾರಿಯನ್ನು ಜೆಎಸ್ಡಬ್ಲ್ಯು ಕಂಪನಿಗೆ ನೀಡಲಾಗಿದೆ. ಪಾರ್ಕ್ ನಿಮಾರ್ಣಕ್ಕಾಗಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದಿದೆ. ಈ ವೇಳೆ ಸಮೀಪದಲ್ಲೇ ಇದ್ದ ಬಸವರಾಜು ಮೃಪಟ್ಟಿದ್ದಾನೆ. ಶಿವಯ್ಯನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಂಡೆ ಸ್ಫೋಟದ ಬೆಂಕಿ ಅಕ್ಕಪಕ್ಕಕ್ಕೂ ಹಬ್ಬಿದೆ. ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬ್ಲಾಸ್ಟ್ ಮಾಡಲು ಬಳಸಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೆಎಸ್ಪಿಡಿಸಿಎಲ್ ಮಹೇಶ್, ಗ್ರಾಮಾಂತರ ಸಿಪಿಐ ಗಿರೀಶ್ ಭೇಟಿಮಾಡಿ ಪರಿಶೀಲಿಸಿಲಿಸಿದ್ದಾರೆ.