ಗುಂಡ್ಲುಪೇಟೆ: ಕಾಡಾನೆಗಳ ದಾಳಿಗೆ ಬಂಡೀಪುರ ಕಾಡಂಚಿನ ಜಮೀನಿನಲ್ಲಿ ಬೆಳೆಯಲಾಗಿದ್ದ ಬೆಳೆಗಳು ನಾಶವಾಗಿದೆ.
ಸೋಮವಾರ ಕುಂದಕೆರೆ ಗ್ರಾಮದ ಸತೀಶ್ ಅವರ ಜಮೀನಿಗೆ ನುಗ್ಗಿದ ಆನೆ ಮಾರುಕಟ್ಟೆಗೆ ಕೊಂಡೊಯ್ಯಲು ಸಂಗ್ರಹಿಸಿಟ್ಟಿದ್ದ ಟೊಮ್ಯಾಟೊ ಕ್ರೇಟ್‌ಗಳನ್ನು ತುಳಿದು ಬೀಟ್‌ರೂಟ್ ಬೆಳೆಯನ್ನು ತಿಂದು ಹಾಕಿವೆ. ಬಳಿಕ ಹುಂಡೀಪುರ ಗ್ರಾಮದ ಕೆಂಪಲಿಂಗಪ್ಪ ಅವರ ಜಮೀನಿನ ಮೇಲೆ ದಾಳಿ ನಡೆಸಿ ಬೆಳೆಯನ್ನು ನಾಶಪಡಿಸಿ ಕ್ರೇಟ್‌ಗಳಲ್ಲಿ ತುಂಬಿಟ್ಟಿದ್ದ ಟೊಮ್ಯಾಟೊವನ್ನು ನಾಶಪಡಿಸಿವೆ. ಮಹಜರು ವೇಳೆ ಹುಲಿ ಪ್ರತ್ಯಕ್ಷ: ವಿಷಯ ತಿಳಿದ ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಬೆಳೆನಷ್ಟ ಮಹಜರು ನಡೆಸುತ್ತಿದ್ದ ವೇಳೆ ಹುಲಿಯಮ್ಮನ ದೇವಾಲಯದ ಬಳಿ ರಾಜಾರೋಷವಾಗಿ ಬಂದ ಹುಲಿ ಮೇಕೆಯೊಂದನ್ನು ಕಚ್ಚಿಕೊಂಡು ಹೋಗಿದೆ.
20 ದಿನಗಳಿಂದ ಕುಂದಕೆರೆ ವಲಯದ ಕುಂದಕೆರೆ ಮತ್ತು ಹುಂಡೀಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ನಿತ್ಯ ಅರಣ್ಯದಿಂದ ಹೊರಬರುವ ಆನೆಗಳು ಕಾಡಂಚಿನ ಗ್ರಾಮಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿಂದು ತುಳಿದು ನಾಶಪಡಿಸುತ್ತಿವೆ. ಇತ್ತೀಚೆಗೆ ಹುರುಳಿ ಕಟಾವು ಆರಂಭವಾಗಿದ್ದು, ಆನೆಗಳ ಭೀತಿಯಿಂದ ರೈತರು ಜಮೀನಿಗೆ ಹೋಗಲು ಭಯಪಡುತ್ತಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹಲವಾರು ದಿನಗಳಿಂದ ಆನೆಗಳು ದಾಳಿ ನಡೆಸುತ್ತಿದ್ದರೂ ಅವುಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದರೂ ಆನೆಗಳು ಹೊರಬರುವುದನ್ನು ತಡೆಗಟ್ಟುತ್ತಿಲ್ಲ. ಇದರಿಂದ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿವೆ. ಅರಣ್ಯ ಇಲಾಖೆ ಬೆಳೆನಷ್ಟಕ್ಕೆ ಪರಿಹಾರವನ್ನೂ ನೀಡುತ್ತಿಲ್ಲ. ಹಿರಿಯ ಅಧಿಕಾರಿಗಳು ರೈತರ ಸಮಸ್ಯೆ ಆಲಿಸದೆ ನಿರ್ಲಕ್ಷಿಸುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಕಾಡಿಗಟ್ಟಲು ಕ್ರಮಕೈಗೊಳ್ಳದಿದ್ದಲ್ಲಿ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹುಂಡೀಪುರ ರೈತರು ಎಚ್ಚರಿಕೆ ನೀಡಿದ್ದಾರೆ.
ಗಸ್ತು ಸಿಬ್ಬಂದಿ ಕಣ್ಣುತಪ್ಪಿಸಿ ಡಿಸೆಂಬರ್ ಅಂತ್ಯದಿಂದ ಎರಡು, ಮೂರು ಆನೆಗಳು ಕಾಡಿನಿಂದ ಹೊರಬರುತ್ತಿವೆ. ಇವು ಹೊರಬರುವ ಪ್ರದೇಶದಲ್ಲಿ ಕಂದಕ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಜತೆಗೆ ಹುಲಿಯನ್ನು ಕಾಡಿಗಟ್ಟಲು ಕೂಂಬಿಂಗ್ ನಡೆಸಲಾಗುವುದು. ಬಿ.ಎಂ.ಮಲ್ಲೇಶ್ ಕುಂದಕೆರೆ ವಲಯಾರಣ್ಯಾಧಿಕಾರಿ