ಜಿಲ್ಲೆ

ಬಂಡೀಪುರ ಉಳಿವಿಗೆ ಪಾದಯಾತ್ರೆ

ಗುಂಡ್ಲುಪೇಟೆ: ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪರಿಸರವಾದಿಗಳು ಹಾಗೂ ಸಂಘಸಂಸ್ಥೆಗಳು ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಯಾವುದೇ ಒತ್ತಡಕ್ಕೆ ಮಣಿಯದೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸ್ಥಳೀಯರು, ಕಾಡಂಚಿನ ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತ ಹಾಗೂ ಕನ್ನಡ ಸಂಘಟನೆಗಳ ಸದಸ್ಯರು, ಮೈಸೂರು, ಬೆಂಗಳೂರು, ಕೇರಳ ಹಾಗೂ ತಮಿಳುನಾಡಿನಿಂದ ಆಗಮಿಸಿದ್ದ ಪರಿಸರ ಪ್ರೇಮಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು, ಪರಿಸರವಾದಿಗಳು ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಕೈಯಲ್ಲಿ ಬಂಡೀಪುರ ಉಳಿಸಿ, ವನ್ಯಜೀವಿ ರಕ್ಷಿಸಿ ಎಂಬ ಪೋಸ್ಟರ್‌ಗಳನ್ನು ಹಿಡಿದು ಉರಿಬಿಸಿಲನ್ನು ಲೆಕ್ಕಿಸದೆ ಕಗ್ಗಳದಹುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಲ್ತಾನ್ ಭತ್ತೇರಿ ರಸ್ತೆಯಲ್ಲಿ 2.5 ಕಿಮೀ ಅಂತರದಲ್ಲಿರುವ ಮದ್ದೂರು ಚೆಕ್‌ಪೋಸ್ಟ್‌ಗೆ ಪಾದಯಾತ್ರೆ ಮೂಲಕ ಸಾಗಿದರು. ಮೈಸೂರಿನಿಂದ ಬಂದಿದ್ದ ಹತ್ತಾರು ಸೈಕಲಿಸ್ಟ್‌ಗಳು ಸೈಕಲ್ ಜಾಥಾ ನಡೆಸಿ ಬೆಂಬಲ ವ್ಯಕ್ತಪಡಿಸಿದರು.

ಚೆಕ್ ಪೋಸ್ಟ್ ಬಳಿ ಆಯೋಜಿಸಿದ್ದ ಸಭೆಯಲ್ಲಿ ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಮಾತನಾಡಿ, ಬಂಡೀಪುರವು 5.5 ಸಾವಿರ ಕಿಲೋ ಮೀಟರ್ ವಿಸ್ತೀರ್ಣದ ಅಪೂರ್ವ ನೀಲಗಿರಿ ಜೀವವೈವಿಧ್ಯದ ತಾಣವಾಗಿದ್ದು ಇದರ ಮಹತ್ವ ಅರ್ಥ ಮಾಡಿಕೊಳ್ಳಬೇಕಾಗಿದೆ. ರಾತ್ರಿ ಸಂಚಾರದಿಂದ ವನ್ಯಜೀವಿಗಳು ಸಾವಿಗೀಡಾಗುತ್ತಿರುವುದು ಮಾತ್ರ ಜನರ ಕಣ್ಣಿಗೆಬೀಳುತ್ತಿದೆ. ಪ್ರಪಂಚದ 80 ಲಕ್ಷ ಜೀವರಾಶಿಗಳಲ್ಲಿ ಮಾನವ ಕೇವಲ ಒಂದು ಕೊಂಡಿ ಅಷ್ಟೇ. ಕಾಡಿನಲ್ಲಿ ಹುಲಿ, ಆನೆಗಳಷ್ಟೇ ಕಪ್ಪೆಗಳಿಗೂ ಮಹತ್ವವಿದೆ. ಅರಣ್ಯದಲ್ಲಿ ವಾಹನಗಳ ಸಂಚಾರ ಆರಂಭವಾದರೆ ಇಡೀ ಜೀವಸಂಕುಲದ ಕೊಂಡಿಗಳು ಒಂದೊಂದಾಗಿ ಕಳಚುವುದರಿಂದ ಮುಂದಿನ ದಿನಗಳಲ್ಲಿ ಮಾನವನ ಅಂತ್ಯವೂ ಸಂಭವಿಸಲಿದೆ. 3 ದಶಕದ ಹಿಂದೆ 15 ನಿಮಿಷಕ್ಕೆ ಒಂದು ವಾಹನ ಸಂಚರಿಸುತ್ತಿದ್ದ ರಸ್ತೆಯಲ್ಲಿ ಸದ್ಯ ಇದೀಗ 4 ಸೆಕೆಂಡಿಗೆ ಒಂದು ಸಂಚರಿಸುತ್ತಿವೆ. ಫ್ಲೈ ಓವರ್, ಎಲಿವೇಟೆಡ್ ಕಾರಿಡಾರ್, ಸುರಂಗಮಾರ್ಗ ಯಾವುದೇ ಅಭಿವೃದ್ಧಿ ಕಾಮಗಾರಿಯೂ ಜೀವವೈಧ್ಯದ ಅಳಿವಿಗೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು ಆಳರಸರು ಅರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಸದ್ಯ ಹೋರಾಟಕ್ಕೆ ರೈತ ಸಂಘಟನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಿ ಜೀವವೈವಿಧ್ಯಗಳ ಉಳಿವಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರಿಸರವಾದಿ ಸಪ್ತ ಗಿರೀಶ್ ಮಾತನಾಡಿ, ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದರಿಂದ ಅಪಘಾತಗಳಲ್ಲಿ ವನ್ಯಜೀವಿಗಳು ಸಾವಿಗೀಡಾಗುವುದು ಮಾತ್ರವಲ್ಲ ಇಲ್ಲಿ ರಸ್ತೆ ಅಗಲೀಕರಣ ಮುಂತಾದ ಚಟುವಟಿಕೆಗಳಿಗೆ ಅವಕಾಶ ನೀಡುವುದು ಮಾನವ ಸಂಕುಲಕ್ಕೆ ಮಾರಕವಾಗಲಿದೆ. ಯಾವುದೇ ಕಾರಣಕ್ಕೂ ಬಂಡೀಪುರ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳ ಜನರಿಗೆ ಆಗುವ ತೊಂದರೆ ಕಾರಣವಾಗುತ್ತದೆ. ಆದ್ದರಿಂದ ಸರ್ಕಾರ ಯಥಾಸ್ಥಿತಿ ಮುಂದುವರಿಸಬೇಕು ಎಂದು ಕೋರಿದರು.

ಬಂಡೀಪುರ ಹುಲಿ ಯೋಜನೆಯ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಾಲಚಂದ್ರ ಮಾತನಾಡಿ, ನಾಗರಹೊಳೆ, ಬಿ.ಆರ್.ಹಿಲ್ಸ್, ಮಲೆ ಮಹದೇಶ್ವರ ಬೆಟ್ಟ ಹಾಗೂ ಸೇಲಂ ಮುಂತಾದ ಕಡೆಗಳಲ್ಲಿ ಸಂಜೆ 6ರಿಂದಲೇ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ. ಆದರೆ, ಪದೇ ಪದೆ ಬಂಡೀಪುರವನ್ನು ಗುರಿಯಾಗಿಸಿ ಕುತಂತ್ರ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ಸ್ಥಳೀಯರು ಹಾಗೂ ಪರಿಸರವಾದಿಗಳು ಎಚ್ಚೆತ್ತಿರುವುದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದರು.

ಕೇರಳದ ಕೊಟ್ಟಾಯಂನ ಪರಿಸರವಾದಿ ಸತೀಶ್ ಮಾತನಾಡಿ, ರಾತ್ರಿ ಸಂಚಾರ ಬಂದ್‌ಗೆ ಬಹುತೇಕ ಕೇರಳಿಗರ ಬೆಂಬಲವಿದೆ. ರಾತ್ರಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕೆ ಎರಡೂ ರಾಜ್ಯಗಳ ಬಸ್‌ಗಳು, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಗಳು ಸಂಚರಿಸುತ್ತಿವೆ. ಆದರೆ, ಮಾಫಿಯಾ ಚಟುವಟಿಕೆಗಳನ್ನು ನಡೆಸುವವರು ಮಾತ್ರ ರಾತ್ರಿ ಸಂಚಾರಕ್ಕೆ ಲಾಬಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪರಿಸರವಾದಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿ ಕೇರಳ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ ಎಂಬುದು ವದಂತಿಯಾಗಿದ್ದು, ಸರ್ಕಾರ ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಕೇರಳವು ರಾತ್ರಿ ಮತ್ತಷ್ಟು ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಮನವಿ ಮಾಡಿದೆ ಅಷ್ಟೇ. ಈಗ ಸಂಚರಿಸುವ ಬಸ್‌ಗಳಿಗೆ ಸಾಕಷ್ಟು ಪ್ರಯಾಣಿಕರು ಬರುತ್ತಿಲ್ಲ. ಆದ್ದರಿಂದ ಮತ್ತಷ್ಟು ಬಸ್‌ಗಳನ್ನು ಬಿಡಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.

ಎಸಿಎಫ್‌ಗಳಾದ ಎನ್.ಪಿ.ನವೀನ್ ಕುಮಾರ್, ಸುರೇಶ್, ಆರ್‌ಎಫ್‌ಒಗಳಾದ ಪುನೀತ್ ಕುಮಾರ್, ನಾಸಿರ್ ಅಹಮದ್, ಪುರಸಭೆ ಅಧ್ಯಕ್ಷ ಮಧುಸೂದನ್, ಕಬ್ಬು ಬೆಳೆಗಾರರ ಒಕ್ಕೂಟದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪರಿಸರವಾದಿಗಳಾದ ಜೋಸೆಫ್ ಹೂವರ್, ನಾಗಾರ್ಜುನಕುಮಾರ್, ಮಣಿ ಮಡಹಳ್ಳಿ, ಆರ್.ಕೆ.ಮಧು, ಶ್ರೀಕಂಠ, ವಿ.ನಾ.ಚಿದಾನಂದ, ಶಶಿಕಾಂತ್, ಸಾಮೂಹಿಕ ನಾಯಕತ್ವದ ರೈತ ಸಂಘದ ಸದಸ್ಯರು, ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.

ಹೋರಾಟಕ್ಕೆ ವಾಟಾಳ್ ಬೆಂಬಲ

ಮಧ್ಯಾಹ್ನ ಎಲ್ಲರಿಗೂ ಬಾತ್ ಮತ್ತು ಮೊಸರನ್ನ ವ್ಯವಸ್ಥೆ ಮಾಡಲಾಗಿತ್ತು. ಪಾದಯಾತ್ರೆಯ ಬಂದೋಬಸ್ತ್ ವಹಿಸಿಕೊಂಡಿದ್ದ ಪಟ್ಟಣ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್ ಕಗ್ಗಳದಹುಂಡಿಯಿಂದ ಮದ್ದೂರು ಚೆಕ್‌ಪೋಸ್ಟ್‌ವರೆಗೆ ಸೈಕಲ್ ಜಾಥಾ ನಡೆಸಿದರು.

ಕಳೆದ ಬಾರಿ ಬಂಡೀಪುರ ಮತ್ತು ಮದ್ದೂರು ಚೆಕ್‌ಪೋಸ್ಟ್‌ಗಳಿಗೆ ಆಗಮಿಸಿ ರಾತ್ರಿ ಸಂಚಾರ ತೆರವು ಮಾಡದಂತೆ ಒತ್ತಾಯಿಸಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.