ಕುಶಾಲನಗರದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಮೋದ್ ಮುತ್ತಪ್ಪ, ಮಂಜುನಾಥ್ ಗುಂಡೂರಾವ್, ಎಂ.ಕೆ.ದಿನೇಶ್, ಜೋಸೆಫ್ ವಿಕ್ಟರ್ ಸೊನ್ಸ್, ಎಸ್.ಸಿ.ಸುರೇಶ್ ಇದ್ದರು. 
ಜಿಲ್ಲೆ

ಬಂಡಿರಸ್ತೆ ಪರಿಕಲ್ಪನೆ ಹೆಸರಲ್ಲಿ ಸರ್ಕಾರಿ ಜಾಗ ಒತ್ತವರಿ

ಕುಶಾಲನಗರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಿಸಲಿರಿಸಿದ್ದ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬ ಅತಿಕ್ರಮಿಸಿಕೊಂಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದರು.

ಕಾಲೇಜು ಆವರಣಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಜಾಗದಲ್ಲಿ ಖಾಸಗಿ ಲೇಔಟ್‌ನ ಮಾಲೀಕ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ವಿ.ಪಿ.ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಪುರಸಭೆ ಸದಸ್ಯರಾದ ಪ್ರಮೋದ್, ಎಂ.ಕೆ.ದಿನೇಶ್, ಪಪಂ ಮಾಜಿ ಸದಸ್ಯ ಜೋಸೆಫ್ ವಿಕ್ಟರ್ ಸೋನ್ಸ್ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಲೇಔಟ್‌ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.

ಕುಶಾಲನಗರದಲ್ಲಿ ಸರ್ಕಾರಿ ಭೂಮಿಗಳ ಸಂರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿದ್ದರೂ ಮೇಲಿಂದ ಮೇಲೆ ಜಾಗ ಕಬಳಿಕೆ ನಡೆಯುತ್ತಲೇ ಇದೆ. ಸರ್ಕಾರಿ ಜಾಗ ಉಳ್ಳವರ ಪಾಲಾಗಬಾರದು. ಸದರಿ ಜಾಗವನ್ನು ಪ್ರೌಢಶಾಲೆ ಮತ್ತು ಕಾಲೇಜು ಅಭಿವೃದ್ಧಿಗೆಂದು ನಾನು ಜಿಪಂ ಸದಸ್ಯನಾಗಿದ್ದಾಗಲೇ ಮೀಸಲಿರಿಸಲಾಗಿತ್ತು. ಜತೆಗೆ, ಬೇಲಿ ಅಳವಡಿಸುವ ಕಾರ್ಯ ಮಾಡಲಾಗಿತ್ತು. ಇದೀಗ ಲೇಔಟ್ ಮಾಲೀಕ ಜಾಗವನ್ನು ಅತಿಕ್ರಮಿಸಿಕೊಂಡು ಬಂಡಿರಸ್ತೆ ಪರಿಕಲ್ಪನೆ ಹುಟ್ಟುಹಾಕಿ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದಾರೆ. ಸರ್ಕಾರಿ ಜಾಗ ಕಬಳಿಸಿ ನಿವೇಶನ ಮಾಡುವ ಹುನ್ನಾರ ನಡೆದಿದೆ ಎಂದು ವಿ.ಪಿ.ಶಶಿಧರ್ ಮಾಧ್ಯಮದವರಿಗೆ ತಿಳಿಸಿದರು.

ಕಾಮಗಾರಿ ಉದ್ದೇಶಕ್ಕೆ ಬೃಹತ್‌ಮರ ಕೂಡ ತೆರವುಗೊಳಿಸಲಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಪರಿಶೀಲಿಸಬೇಕಿದೆ. ಲೇಔಟ್ ಜಾಗದ ಬಗ್ಗೆ ಸರ್ವೇ ನಡೆಯುವುದು ಅಗತ್ಯವಿದೆ ಎಂದು ಶಶಿಧರ್ ಒತ್ತಾಯಿಸಿದರು.

ಲೇಔಟ್ ಮಾಲೀಕ ಎಸ್. ಸಿ.ಸುರೇಶ್ ಮಾತನಾಡಿ, ನಾನು ಸರ್ಕಾರಿ ಭೂಮಿ ಅತಿಕ್ರಮಿಸಿಲ್ಲ, ಕಬಳಿಕೆಗೆ ಕೂಡ ಮುಂದಾಗಿಲ್ಲ. ಶಾಲಾ ಕಟ್ಟಡಕ್ಕೆ ಹಾನಿಯಾಗದಂತೆ ಮಣ್ಣಿನ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಅರಣ್ಯಾಧಿಕಾರಿಗಳ ಅನುಮತಿ ಪಡೆದೇ ಮರ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.