ಜಿಲ್ಲೆ

ಬಂಡಿದ್ಯಾವರ ಬಾಡೂಟಕ್ಕೆ ಜನಸಾಗರ : ಟೇಕಲ್​ ಮಾರ್ಗದಲ್ಲಿ 3 ತಾಸು ಟ್ರಾಫಿಕ್​ ಜಾಮ್​, ಸುಗಮ ಸಂಚಾರಕ್ಕಾಗಿ ಪೊಲೀಸರ ಹರಸಾಹಸ

Kolar

ಕೊಲಾರ: ಗ್ರಾಮ ದೇವತೆಗಳಿಗೆ ತಂಬಿಟ್ಟಿನ ದೀಪೋತ್ಸವದ ಜತೆಗೆ ಒಕ್ಕಲಿಗರ ಬಂಡಿದ್ಯಾವರ ಮಹೋತ್ಸವವು ತಾಲೂಕಿನ ಬೆಗ್ಲಿಹೊಸಹಳ್ಳಿಯಲ್ಲಿ ಅದ್ದೂರಿಯಾಗಿ ನಡೆಯಿತು. ಬುಧವಾರ ಬಾಡೂಟಕ್ಕೆ ಜಿಲ್ಲೆಯ ನಾನಾಕಡೆಗಳಿಂದ ಹಾಗೂ ಬೆಂಗಳೂರು ಮತ್ತಿತರ ಭಾಗಗಳಿಂದ ಜನಸಾಗರವೇ ಹರಿದುಬಂದಿತ್ತು. ಇದರ ಪರಿಣಾಮ ಕೋಲಾರ ನಗರದ ಟೇಕಲ್​ ವೃತ್ತದಿಂದ 5 ಕಿ.ಮೀ ದೂರದ ಬೆಗ್ಲಿಹೊಸಹಳ್ಳಿ ತನಕ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ಸುಮಾರು 800 ಮನೆಗಳಿರುವ ಬೆಗ್ಲಿಹೊಸಹಳ್ಳಿಯಲ್ಲಿ ಬಂಡಿದ್ಯಾವರ ಹಬ್ಬ 45 ವರ್ಷದ ನಂತರ ಮಾಡಲಾಗುತ್ತಿದ್ದು, ಸೋಮವಾರ ಮತ್ತು ಮಂಗಳವಾರ ಗ್ರಾಮದೇವತೆಗಳಿಗೆ ದೀಪೋತ್ಸವ ಮಾಡಲಾಗಿತ್ತು. ಒಕ್ಕಲಿಗರ ಮನೆಗಳಲ್ಲಿ ಮದುವೆಗೆ ಮುನ್ನ ಮಕ್ಕಳಿಗೆ ಕಿವಿ ಚುಚ್ಚುವ ದ್ಯಾವರ ಅಥವಾ ಬಂಡಿದ್ಯಾವರ (ದೊಡ್ಡದ್ಯಾವರ) ಮಾಡುವುದು ಕಡ್ಡಾಯ. ಪೀಳಿಗೆಗೆ ಒಮ್ಮೆ ಮಾಡುವ ಈ ದ್ಯಾವರದಲ್ಲಿ ಶಿಸ್ತು ಹಾಗೂ ಶ್ರದ್ಧೆಯಿಂದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಈ ದ್ಯಾವರಕ್ಕೆ ಮಹತ್ವವಿದ್ದು, ಗ್ರಾಮದ ಸುತ್ತ ಸಾಟು (ಗ್ರಾಮದೊಳಗೆ ಚಪ್ಪಲಿ ಸಹ ಹಾಕಿಕೊಂಡು ಓಡಾಡುವಂತಿಲ್ಲ) ಮಾಡಿಸಿ ಮುರು ದಿನದಿಂದ ಭಕ್ತಿಯಿಂದ ತಂಬಿಟ್ಟಿನ ದೀಪೋತ್ಸವ ಮತ್ತು ದ್ಯಾವರ ಆಚರಿಸಿದ್ದರು.

ತಂಬಿಟ್ಟಿನ ದೀಪೋತ್ಸವವನ್ನು ಗ್ರಾಮಸರು ಆಚರಿಸಿದ್ದು, ಬೆಗ್ಲಿಹೊಸಹಳ್ಳಿ ಒಕ್ಕಲಿಗರ ದಾಯಾದಿ ಸಂಬಂಧಿಕರಿದ್ದ ಹುಣಸೀಕೋಟೆ, ಚೆಲುವನಹಳ್ಳಿ, ಆನೇಪುರ ಸೇರಿ ಹಲವು ಗ್ರಾಮಗಳ ನೂರಾರು ಕುಟುಂಬಗಳವರೂ ಬಂಡಿದ್ಯಾವರ ಮಾಡಿಕೊಳ್ಳಲು ಪಾಲ್ಗೊಂಡಿದ್ದರು. ಸೋಮವಾರ ಆಂಜನೇಯಸ್ವಾಮಿ, ಪಟಾಲಮ್ಮ ಮತ್ತು ಗೌರಮ್ಮದೇವಿಗೆ ತಂಬಿಟ್ಟಿನ ದೀಪೋತ್ಸವ ಮಾಡಿದ್ದು, ಮಂಗಳವಾರ ಗಂಗಮ್ಮ, ಮಾರಮ್ಮ ಮತ್ತಿತರ ದೇವತೆಗಳಿಗೆ ದೀಪೋತ್ಸವ ಮಾಡಿದ್ದರು.

ಬಂಡಿದ್ಯಾವರ ಪ್ರಯುಕ್ತ ಸಂಪ್ರದಾಯದಂತೆ ರಾತ್ರಿ ದಂಪತಿ ಕರಗ ಹೊತ್ತು ಸಾಗಿದ್ದು ಅತ್ಯಾಕರ್ಷಕವಾಗಿತ್ತು. ಬುಧವಾರ ಗ್ರಾಮಸ್ಥರು ಪ್ರತ್ಯೇಕವಾಗಿ ಸಂಬಂಧಿಕರು, ಆಪ್ತರಿಗೆ ಬಾಡೂಟಕ್ಕೆ ಆಹ್ವಾನಿಸಿದ್ದು, ಅವರವರ ಶಕ್ತ್ಯಾನುಸಾರ ಕುರಿ, ಕೋಳಿ, ಮೇಕೆ ಮಾಂಸದೊಂದಿಗೆ ಭರ್ಜರಿ ಬಾಡೂಟ ಆಯೋಜಿಸಿದ್ದರು.

ಬಾಡೂಟಕ್ಕೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಮಾಲೂರು, ಟೇಕಲ್​ ಭಾಗದಿಂದ ಸಹಸ್ರಾರು ಮಂದಿ ಕಾರು, ದ್ವಿಚಕ್ರವಾಹನಗಳಲ್ಲಿ ಆಗಮಿಸಿದ್ದರು. ಇದರಿಂದಾಗಿ ಕೋಲಾರದ ಟೇಕಲ್​ ವೃತ್ತ (ಶ್ರೀಯೋಗಿ ನಾರೇಯಣ ವೃತ್ತ)ದಿಂದ ಪೇಟೆಚಾಮನಹಳ್ಳಿ, ಛತ್ರಕೋಟಿಹಳ್ಳಿ ಕಡೆ ಮಾರ್ಗದುದ್ದಕ್ಕೂ ಸಾವಿರಾರು ವಾಹನಗಳು ಸಂಚರಿಸಿ ಮಧ್ಯಾಹ್ನ 12ಗಂಟೆಯಿಂದ ಸಂಜೆ 3ಗಂಟೆ ತನಕ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ಮಧ್ಯಾಹ್ನ ಬಿರು ಬಿಸಿಲಿನಲ್ಲಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡು ಬಸವಳಿದಿದ್ದ ಸವಾರರು, ಕಾರು, ಬಸ್​ಗಳಲ್ಲಿ ತೆರಳುತ್ತಿದ್ದವರಲ್ಲಿ ಹಲವರು ಪೊಲೀಸ್​ ಇಲಾಖೆಗೆ ಮಾಹಿತಿ ನೀಡಿದ್ದರಿಂದ ರಾ.ಹೆದ್ದಾರಿ 75ರಲ್ಲಿ ಟೇಕಲ್​ ಅಂಡರ್​ಪಾಸ್​ ಬಳಿ ಆಗಮಿಸಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ್​ ಸ್ವತ ತಾವೇ ನಿಂತು ಸರ್ವಿಸ್​ ಮಾರ್ಗದಲ್ಲಿ ಬೆಂಗಳೂರು, ಮುಳಬಾಗಿಲು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ತಡೆದು ಟೇಕಲ್​ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಕೋಲಾರ ಸಂಚಾರಿ ಠಾಣೆ ಪಿಎಸ್​ಐ ಅಣ್ಣಯ್ಯ ಮತ್ತು ಪೊಲೀಸ್​ ಸಿಬ್ಬಂದಿ 2ರಿಂದ 3 ಗಂಟೆ ಪ್ರಾಯಾಸಪಟ್ಟು ಟ್ರಾಫಿಕ್​ಜಾಮ್​ನಲ್ಲಿ ಸಿಲುಕಿಕೊಂಡಿದ್ದ ವಾಹನಗಳನ್ನು ಮುಂದಕ್ಕೆ ಕಳುಹಿಸಿಕೊಟ್ಟರು. ಗ್ರಾಮದ ಒಂದು ಕಿ.ಮೀ.ದೂರದಲ್ಲಿ ವಾಹನಗಳ ನಿಲುಗಡೆ ಮಾಡಲಾಗಿತ್ತು.

ತೋಟಗಳಲ್ಲೆಲ್ಲ ಪೆಂಡಾಲ್​ಗಳು: ಬೆಗ್ಲಿಹೊಸಹಳ್ಳಿಯ ಸುತ್ತಮುತ್ತಲಿನ ಹೊಲ, ತೋಟಗಳಲ್ಲಿ ಮತ್ತು ಮನೆಗಳ ಬಳಿ ಬೃಹತ್​ ಪೆಂಡಾಲ್​ಗಳನ್ನು ಹಾಕಿಸಿ ಬಾಡೂಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೆಂಡಾಲ್​ಗಳ ಬಳಿ ಜನ ಕಾಣಿಸಿಕೊಳ್ಳುತ್ತಿದ್ದಂತೆ ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಬ್ಬಾ ಇಷ್ಟು ಜನ, ಇಷ್ಟೊಂದು ವಾಹನಗಳು ಈ ಮಾರ್ಗದಲ್ಲಿ ಸಂಚರಿಸಿದ್ದು ನಾವು ಕಂಡೇ ಇರಲಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದರು.