ಮೈಸೂರು: ಬಂಡವಾಳದಾರರು ಮಾಡುವಂತಹ ಎಲ್ಲ ಅಕ್ರಮಗಳನ್ನು ಸಕ್ರಮವನ್ನಾಗಿ ಮಾಡುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ ಎಂದು ಸಿಟಿಐಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ವಾಗ್ದಾಳಿ ನಡೆಸಿದರು.
ನಗರದ ಸುಬ್ಬರಾಯನ ಕೆರೆ ಮೈದಾನದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ವತಿಯಿಂದ ಶನಿವಾರ ಆಯೋಜಿಸಿದ್ದ 11ನೇ ವರ್ಷದ ಜಿಲ್ಲಾ ಸಮ್ಮೇಳನದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಡವಾಳದಾರರ ಪರವಾಗಿ ಕಾನೂನು ಜಾರಿಗೊಳಸಲು ಮುಂದಾಗಿದ್ದಾರೆ. ಬಂಡವಾಳದಾರರ ತಪ್ಪುಗಳಿಗೆ ವಿನಾಯಿತಿ ನೀಡುವ ಕೆಲಸ ಮಾಡಲು ಹೊರಟಿದ್ದಾರೆ. ಈಗಿರುವ ಕಾನೂನುಗಳ ಜಾರಿಗಾಗಿ ಹೋರಾಟ ನಡೆದರೆ ಅವುಗಳಿಗೆ ಕಿಮ್ಮತ್ತಿಲ್ಲದಂತಾಗಿದೆ ಎಂದು ಕಿಡಿಕಾರಿದರು.
ಪ್ರತಿಪಕ್ಷಗಳು, ಉಳ್ಳವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಆದರೆ, ಇವರೆಲ್ಲ ಖಾಸಗಿ ಬಂಡವಾಳ ಕಂಪನಿಗಳಿಗೆ, ಸರ್ಕಾರಗಳು ನೀಡುತ್ತಿರುವ ಪ್ರೋತ್ಸಾಹ ಹಣದ ಕುರಿತು ಆಕ್ಷೇಪಿಸುವುದಿಲ್ಲ ಎಂದು ಹರಿಹಾಯ್ದರು.
ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಹಾಗೂ ವೇತನಕ್ಕಾಗಿ ಹಲವು ವರ್ಷಗಳಿಂದ ಹೋರಾಟಗಳು ನಡೆಸಲಾಗಿದ್ದು, ಇತ್ತೀಚೆಗೆ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆಗೆ ನೀಡಲಾಗಿದೆ.
ಆದರೆ, ಅದನ್ನು ಕಡ್ಡಾಯವಾಗಿ ಕಾನೂನು ಜಾರಿಗೊಳಿಸಬೇಕು. ಇದರಿಂದ ಮಹಿಳೆಯರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುವ ಸಮಸ್ಯೆಗಳು ಎದುರಾಗಲಿವೆ. ಮಹಿಳೆಯರ ನೈಸರ್ಗಿಕವಾದ ದೈಹಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮಹಿಳೆಯರನ್ನು ಸಬಲೀಕರಣ ಮಾಡುವ, ಸುರಕ್ಷತೆ ನೀಡುವ ಕೆಲಸವಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರವು ವೇತನ ಸಂಹಿತೆ ಕಾನೂನು ಹಾಗೂ ಕೈಗಾರಿಕೆಗಳ ವಿವಾದಗಳ ಸಂಹಿತೆ, ಸುರಕ್ಷತಾ ಸಂಹಿತೆ, ಸಾಮಾಜಿಕ ರಕ್ಷಣೆ ಸಂಹಿತೆಗಳನ್ನು ಸಂಸತ್ತಿನಲ್ಲಿ ಜಾರಿಗೊಳಿಸಿದೆ. 2025 ಮುಗಿಯುತ್ತಾ ಬಂದರೂ ಇಂತಹ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಇದು ಸಂಘಟನೆಗಳ ಹೋರಾಟದ ಫಲ ಮತ್ತು ನಮ್ಮ ಹಕ್ಕುಗಳನ್ನು ಬಿಟ್ಟು ಕೊಡದ ತೀರ್ಮಾನಗಳು ಕಾರಣ ಎಂದು ತಿಳಿಸಿದರು.
ದೇಶದ ಭವಿಷ್ಯವನ್ನು ರಕ್ಷಣೆ ಮಾಡಿಕೊಳ್ಳಲು ಕಾರ್ಮಿಕರು, ರೈತರ ಚಳವಳಿಗಳು ಅಗತ್ಯವಾಗಿದ್ದು, ಕಾರ್ಮಿಕರಿಗೆ ಮಾರಕವಾದ ಕಾನೂನುಗಳನ್ನು ಕೇಂದ್ರದ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತಂದಿವೆ.
ಯಾವುದೇ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿದರೆ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗಿದೆ. ನಮ್ಮ ಹೋರಾಟಕ್ಕೆ ಮಣಿದು ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ರಾಜ್ಯದಲ್ಲಿ ರೈತರ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಅಗ್ಗದ ದರದಲ್ಲಿ ಕೈಗಾರಿಕೆಗಳಿಗೆ ಮಾರುವ ಕ್ರಮದ ವಿರುದ್ಧ ಹೋರಾಟ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಭೂಮಿ ಹೋರಾಟಗಳಲ್ಲಿ ಸಂಘಟನೆ ಜತೆ ಸೇರಿ ವಿಜಯ ಸಾಧಿಸಿದೆ. ಹೀಗಾಗಿ ಇವತ್ತು ದೇಶದೊಳಗೆ, ದೇಶದ ಭವಿಷ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಚಳವಳಿಗಳು ಅಗತ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಸುನಂದಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ವಿಕ್ರಾಂತ್ ಟಯರ್ ಕಂಪನಿಯ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಜಯರಾಮ್, ಖಜಾಂಚಿ ಅಣ್ಣಪ್ಪ ಇನ್ನಿತರರು ಪಾಲ್ಗೊಂಡಿದ್ದರು.