ಹನೂರು: ತಾಲೂಕಿನ ಬಂಡಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ 2025-56ನೇ ಸಾಲಿನಲ್ಲಿ 113 ಮಕ್ಕಳು ದಾಖಲಾಗುವುದರ ಮೂಲಕ ದಾಖಲೆ ನಿರ್ಮಿಸಿ ಇತರ ಶಾಲೆಗಳಿಗೆ ಮಾದರಿಯಾಗಿದೆ.
ಶತಮಾನವನ್ನು ಕಂಡಿರುವ ಈ ಶಾಲೆಗೆ ಬಂಡಳ್ಳಿ ಸೇರಿದಂತೆ ಸುಂಟರದೊಡ್ಡಿ, ನಾಗನಕಟ್ಟೆ ದೊಡ್ಡಿ ಹಾಗೂ ಈ ಭಾಗದ ತೋಟದ ಮನೆಗಳಿಲ್ಲಿರುವ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಕಳೆದ ಸಾಲಿನಿಂದ ಎಲ್‌ಕೆಜಿ, ಯುಕೆಜಿಯನ್ನು ಅರಂಭಿಸಲಾಗಿದ್ದು, ಪ್ರಸ್ತುತ ಒಟ್ಟು 330 ವಿದ್ಯಾರ್ಥಿಗಳು ಈ ಶಾಲೆಯ ಕಲಿಕಾ ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಶಾಲೆಯಲ್ಲಿ ಕೊಠಡಿ, ಶೌಚಗೃಹ ಸೇರಿದಂತೆ ಕೆಲವು ಮೂಲಸೌಕರ್ಯಗಳ ಕೊರತೆ ಇದೆ. ಇದರ ನಡುವೆಯೂ ಇಲ್ಲಿನ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಮುಖ್ಯ ಶಿಕ್ಷಕ ಗುರುಸ್ವಾಮಿ ಅವರು ಎಸ್‌ಡಿಎಂಸಿ, ಗ್ರಾಮಸ್ಥರು ಹಾಗೂ ಶಿಕ್ಷಕರ ಸಹಕಾರ ಪಡೆದು ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇನ್ನಿಲ್ಲದ ಕಾಳಜಿ ವಹಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದಾಖಲಾತಿಯಲ್ಲಿ ದಾಖಲೆ: ಕಳೆದ 5 ವರ್ಷದ ಶಾಲೆಯ ದಾಖಲಾತಿ ಪ್ರಮಾಣವನ್ನು ಅವಲೋಕಿಸಿದಾಗ ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ದಾಖಲೆ ನಿರ್ಮಿಸಿದೆ. 2019-20ನೇ ಸಾಲಿನಲ್ಲಿ 1 ರಿಂದ 8ನೇ ತರಗತಿವರೆಗೆ ಒಟ್ಟು 240 ಮಕ್ಕಳು ದಾಖಲಾಗಿದ್ದರೆ, 2020-21ರಲ್ಲಿ 230, 2021-22ರಲ್ಲಿ 272, 2022-23ರಲ್ಲಿ 264, 2023-24ರಲ್ಲಿ 237, 2024-25ರಲ್ಲಿ 217 ಹಾಗೂ ಈ ಸಾಲಿನಲ್ಲಿ 330 ಮಕ್ಕಳು ದಾಖಲಾತಿಯನ್ನು ಹೊಂದಿದ್ದು, ಕಳೆದ ಸಾಲಿಗಿಂತ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಟ್ಟು 113 ಮಕ್ಕಳು ದಾಖಲಾಗಿರುವುದು ದಾಖಲೆ. ಇದಕ್ಕೆ ಗುಣಮಟ್ಟದ ಶಿಕ್ಷಣ, ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಶಿಕ್ಷಕರ ಕಾಳಜಿಯ ಫಲ:
ಕಡ್ಡಾಯ ಶಿಕ್ಷಣ ನೀತಿಯ ಉದ್ದೇಶ ಪ್ರತಿಯೊಂದು ಮಗು ಶಾಲೆಯಲ್ಲಿರಬೇಕು. ಯಾವುದೇ ಮಗು ಶಾಲೆಯಿಂದ ವಂಚಿತರಾಗಬಾರದು ಎಂಬುದಾಗಿದೆ. ಹಾಗಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಪ್ರತಿ ಶಾಲೆಯು ದಾಖಲಾತಿ ಆಂದೋಲನವನ್ನು ಕೈಗೊಳ್ಳುವುದು ಸಾಮಾನ್ಯ. ಆದರೆ ಬಂಡಳ್ಳಿ ಶಾಲೆಯಲ್ಲಿನ ಶಿಕ್ಷಕರು ಮಕ್ಕಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎನ್ನುವ ದೃಢ ನಿರ್ಧಾರವನ್ನು ಹೊಂದಿ ಪ್ರಸಕ್ತ ಶೈಕ್ಷಣಿಕ ಸಾಲಿಗೂ ಮುನ್ನವೇ ಬೇಸಿಗೆ ಅವಧಿಯಲ್ಲೇ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಕರಪತ್ರದ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದರು. ಇದರ ಫಲ ಮಕ್ಕಳ ದಾಖಲಾತಿಯಲ್ಲಿ ಏರಿಕೆ ಕಂಡಿರುವುದಕ್ಕೆ ಸಾಕ್ಷಿಯಾಗಿದೆ. ದಾಖಲಾದ ಮಕ್ಕಳಿಗೆ ಇಲ್ಲಿನ ಶಿಕ್ಷಕರು ಉಚಿತ ಟ್ರಾೃಕ್ ಶೂಟ್ ನೀಡಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ.
ಕೊಠಡಿ ಸಮಸ್ಯೆ
ಶಾಲೆಯಲ್ಲಿ ನೀಡುವ ಗುಣಮಟ್ಟದ ಶಿಕ್ಷಣವನ್ನು ಅರಿತು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಮಕ್ಕಳನ್ನು ಕೆಲ ಪಾಲಕರು ಈ ಶಾಲೆಗೆ ಸೇರಿಸಿದ್ದಾರೆ. ಇತ್ತ ದಾಖಲಾತಿಯನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ರೂಪಿಸಬೇಕು ಎಂಬುದು ಇಲ್ಲಿನ ಶಿಕ್ಷಕರ ಆಶಯ.
ಆದರೆ ಶಾಲೆಯಲ್ಲಿ 3 ತರಗತಿ ಕೊಠಡಿಗಳು ಶಿಥಿಲಾವಸ್ಥೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಬೀಳುವ ಸ್ಥಿತಿಯಲ್ಲಿದೆ. ಜತೆಗೆ ಕೊಂಡಿಯೊಂದು ಮಳೆಗಾಳಿಗೆ ಛಾವಣಿ ಸಂಪೂರ್ಣ ನಾಶವಾಗಿದ್ದು, ಗೋಡೆ ಕುಸಿಯುವ ಹಂತದಲ್ಲಿದೆ. ಶಿಥಿಲಾವಸ್ಥೆಯ ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕಟ್ಟಡವನ್ನು ನಿರ್ಮಿಸುವಂತೆ ಇಲ್ಲಿನ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಮಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕೊಠಡಿ ಸಮಸ್ಯೆ ಉದ್ಭವಿಸಿದೆ. ಪರಿಣಾಮ ಒಂದೇ ಕೊಠಡಿಯಲ್ಲಿ 4 ಮತ್ತು 5ನೇ ತರಗತಿ ಹಾಗೂ ಕಚೇರಿಯಲ್ಲಿಯೇ ನಲಿಕಲಿ ತರಗತಿಯನ್ನು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೊಠಡಿ ಸಮಸ್ಯೆಯನ್ನು ಬಗೆಹರಿಸಿ ಶಾಲೆಯ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.
ಕಟ್ಟಡ ತೆರವಿಗೆ ಎಸ್‌ಡಿಎಂಸಿ ನಿರ್ಧಾರ: ಶಾಲೆಯಲ್ಲಿ 3 ಕೊಠಡಿಗಳ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಕಳೆದ ತಿಂಗಳು ಸುರಿದ ಮಳೆಗೆ ಕೊಠಡಿಯ ಛಾವಣಿ ಹಾಗೂ ಗೋಡೆ ಕುಸಿದಿದೆ. ಶಾಲೆಯ ಆವರಣವು ಕಿರಿದಾಗಿದ್ದು, ಮಕ್ಕಳು ಇಲ್ಲಿಯೇ ಆಟೋಟದಲ್ಲಿ ಭಾಗಿಯಾಗುತ್ತಾರೆ. ಹೀಗಿರುವಾಗ ಶಿಥಿಲಗೊಂಡಿರುವ ಗೋಡೆಯು ಕುಸಿಯುವ ಮುನ್ಸೂಚನೆ ಇದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆದರೆ ಸಂಬಂಧಪಟ್ಟವರು ತೆರವಿಗೆ ಮುಂದಾಗಿಲ್ಲ. ಈ ದಿಸೆಯಲ್ಲಿ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ಮಕ್ಕಳ ಹಿತರಕ್ಷಣೆಯ ಉದ್ದೇಶದಿಂದ ಶಿಥಿಲ ಕೊಠಡಿಗಳ ತೆರವಿಗೆ ಮುಂದಾಗಿದೆ. ಮುಂದಿನ ದಿನಗಳಲ್ಲಾದರೂ ಸಂಬಂಧಪಟ್ಟವರು ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಶಾಲೆಗೆ ಈ ವರ್ಷ 113 ಮಕ್ಕಳು ದಾಖಲಾಗಿರುವುದು ಶ್ರಮಕ್ಕೆ ತಂದ ಪ್ರತಿಫಲ. ಪ್ರವೇಶಾತಿ ಮುಂದುವರಿಸಿದೆ. ಆದರೆ ಶಾಲೆಯಲ್ಲಿ 3 ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಬೀಳುವ ಸ್ಥಿತಿಯಲ್ಲಿದೆ. ಜತೆಗೆ ಕೊಠಡಿ ಸಮಸ್ಯೆಯೂ ಇದೆ. ಒಂದೇ ಕೊಠಡಿಗಳಲ್ಲಿ 2 ತರಗತಿಗಳನ್ನು ನಡೆಸಲಾಗುತ್ತಿದೆ. ಗುರುಸ್ವಾಮಿ ಮುಖ್ಯ ಶಿಕ್ಷಕ ಬಂಡಳ್ಳಿ ಶಾಲೆ ಸೇರಿದಂತೆ ತಾಲೂಕಿನಲ್ಲಿ ಶಿಥಿಲಾವಸ್ಥೆಯಿಂದ ಕೂಡಿರುವ ಕೊಠಡಿ ಕಟ್ಟಡವನ್ನು ಮಕ್ಕಳ ರಕ್ಷಣೆಯ ಹಿತದೃಷ್ಟಿಯಿಂದ ತೆರವುಗೊಳಿಸಲು ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಡಿ.ಸಿ ಶೃತಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಚಾ.ನಗರ