ಜಿಲ್ಲೆ

ಬಂಜಾರಾ ಭವನ ಲೋಕಾರ್ಪಣೆ

ಬೀದರ್: ನಗರದ ಗುರುದ್ವಾರ ಹತ್ತಿರದ ಚಿಕ್ಕಪೇಟ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಬಂಜಾರಾ ಭವನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭವನ ಉದ್ಘಾಟಿಸಿ ಮಾತನಾಡಿ, ಬಂಜಾರಾ ಸಮಾಜವು ಅತ್ಯಂತ ಹಿಂದುಳಿದಿದೆ. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಇನ್ನಷ್ಟೂ ಪ್ರಗತಿ ಸಾಧಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬಂಜಾರಾ ಭವನ ನಿರ್ಮಾಣವಾಗಬೇಕು ಎನ್ನುವುದು ಸಮಾಜದ ಬಹುದಿನಗಳ ಬೇಡಿಕೆಯಾಗಿತ್ತು. ಹಿಂದಿನ ಜಿಲ್ಲಾಧಿಕಾರಿ ದಿ.ಅನುರಾಗ ತಿವಾರಿ ಅವರು ನಿವೇಶನ ಮಂಜೂರು ಮಾಡಿದ್ದರು. ಸಂತ ಸೇವಾಲಾಲರ ಆಶಯದಂತೆ ಜಿಲ್ಲೆಯಲ್ಲಿ ಭವನ ನಿರ್ಮಾಣ ಆಗಿದೆ. ಎಲ್ಲ ಜಿಲ್ಲೆಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಬಂಜಾರಾ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಬಂಜಾರಾ ಸಮಾಜದ ಜನತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕು ಎನ್ನುವ ಸದಾಶಯದೊಂದಿಗೆ ಸರ್ಕಾರ ತಾಂಡಾ ಅಭಿವೃದ್ಧಿ ನಿಗಮ ರಚಿಸಿದೆ. ಇದರ ಮೂಲಕ ಸಮಾಜದ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಲಾಭ ಪಡೆಯಬೇಕು. ಬಂಜಾರಾ ಸಮುದಾಯವು ಪರಂಪರಾಗತವಾಗಿ ಬಂದಿರುವ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಮ್ ಖಾನ್ ಮಾತನಾಡಿ, ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಜಾಗೃತಿಯ ಕೊರತೆಯಿಂದಾಗಿ ಯೋಜನೆಗಳು ಬಂಜಾರಾ ಸಮಾಜಕ್ಕೆ ತಲುಪುತ್ತಿಲ್ಲ. ತಾಂಡಾ ಅಭಿವೃದ್ಧಿ ನಿಗಮದಿಂದ ಜಾಗೃತಿ ಕಾರ್ಯಕ್ರಮ ನಡೆಸಿ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಮುಖಂಡರಾದ ಚಂದ್ರಾಸಿಂಗ್, ರಾಮರಾವ ನಾಯಕ್ ಮಾತನಾಡಿದರು. ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಅಕ್ಕ ಅನ್ನಪೂರ್ಣ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಜಿಪಂ ಸದಸ್ಯರಾದ ಮಾರುತಿರಾವ್ ಚವ್ಹಾಣ್, ಜಯಶ್ರೀ ರಾಠೋಡ್, ಮುಖಂಡರಾದ ಮಾಣಿಕರಾವ್ ಪವಾರ್, ಗೋಪಾಲಸಿಂಗ್ ರಾಠೋಡ್, ಶಾಂತಕುಮಾರ ರಾಠೋಡ್, ಪ್ರೇಮಸಿಂಗ್ ನಾಯಕ್, ರಘುನಾಥ ರಾಠೋಡ್, ಮಾಣಿಕ ಚವ್ಹಾಣ್, ಲಕ್ಷ್ಮಣ ರಾಠೋಡ್, ಮಾಣಿಕರಾವ್ ಪವಾರ್, ವೀರಶೆಟ್ಟಿ ರಾಠೋಡ್, ಪ್ರಕಾಶ ಟೊಣ್ಣೆ, ಸುರೇಶ ಭೋಸ್ಲೆ, ಪ್ರದೀಪ ಪವಾರ, ವಸಂತ ಬಿರಾದಾರ, ಬಂಡೆಪ್ಪ ಕಂಟೆ, ಅರಹಂತ ಸಾವಳೆ, ಕೇರಬಾ ಪವಾರ, ರಮೇಶ ಉಪಾಸೆ, ರಾಮಕೃಷ್ಣ ಸಾಳೆ, ಅಶೋಕ ಪಡಶೆಟ್ಟಿ ಇತರರಿದ್ದರು. ಬಸವರಾಜ ಪವಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಭಗುಸಿಂಗ್ ಜಾಧವ್, ಬಳವಂತರಾವ್ ರಾಠೋಡ್ ನಿರೂಪಣೆ ಮಾಡಿದರು. ಗುತ್ತಿಗೆದಾರ ಜಯಸಿಂಗ್ ರಾಠೋಡ್ ವಂದಿಸಿದರು.