ತರೀಕೆರೆ: ತಾಲೂಕಿನೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು, ಮಕ್ಕಳು ಬೆಳಗಿನ ಜಾವ ಮನೆಗೆ ಹೂ ಮಾಲೆ, ತಳಿರು ತೋರಣ, ಬಾಳೇಕಂದಿನಿಂದ ಅಲಂಕರಿಸಿದರು. ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಮೆರುಗು ನೀಡಿದರು.
ಬೆಳಗ್ಗೆ ಗೋವುಗಳು, ಇಷ್ಟಾರ್ಥ ದೇವರಿಗೆ ಪೂಜೆ ಸಲ್ಲಿಸಿ, ವಿವಿಧ ಬಗೆಯ ಅಡುಗೆಯನ್ನು ಗೋವುಗಳಿಗೆ ನೀಡಿದರು. ಸಂಜೆ ಮನೆ ಮತ್ತು ಅಂಗಳದಲ್ಲಿ ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ದೀಪಾವಳಿ ಹಬ್ಬವನ್ನು ಬಂಜಾರ ಸಮಾಜದವರು ವಿಶೇಷವಾಗಿ ಆಚರಿಸಿದರು. ಕನ್ಯೆಯರು ಸಾಮೂಹಿಕವಾಗಿ ಕಾಡಂಚಿನ ಜಮೀನುಗಳಿಗೆ ತೆರಳಿ ರಾಗಿ, ಹುರುಳಿ ತೆನೆ ಸೇರಿ ವಿವಿಧ ಜಾತಿಯ ಹೂವುಗಳನ್ನು ಬಿಡಿಸಿ ತಂದು ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲ್ ಸ್ವಾಮಿ ದೇಗುಲದ ಎದುರಿಟ್ಟು ಸಾಂಪ್ರದಾಯಿಕ ನೃತ್ಯ ಮಾಡಿದರು. ಮನೆ ಮನೆಗೆ ತೆರಳಿ ಕೆರಕ ಸಿದ್ಧಪಡಿಸಿಟ್ಟು ಅಡುಗೆ ತಯಾರಿಸಿದರು. ಅನ್ನ, ಪಾಯಸ, ಕೋಸಂಬರಿ, ಪಲ್ಯ, ಮೆಂತ್ಯ ಮುದ್ದೆ, ಅಕ್ಕಿ ಪಾಯಸ ಸೇರಿ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಅಡುಗೆಯನ್ನು ಸೌದೆ ಒಲೆಯ ಕೆಂಡದಲ್ಲಿ ಇರಿಸಿ ತುಪ್ಪ ಸುರಿದು ಹಿರಿಯರಿಗೆ ಎಡೆ ಅರ್ಪಿಸಿದರು. ಪೂಜೆ ಸಲ್ಲಿಸಿ ಕುಟುಂಬಸ್ಥರೆಲ್ಲ ಪ್ರಾರ್ಥನೆ ಸಲ್ಲಿಸಿದರು. ಕತ್ತಲಾಗುತ್ತಿದ್ದಂತೆ ಕನ್ಯೆಯರು ಹಣತೆ ಹಚ್ಚಿ ದೇವರು ಮತ್ತು ಅಗಲಿದ ಹಿರಿಯರನ್ನು ಸ್ಮರಿಸಿ ಧಾರ್ಮಿಕ ಪಠಣ ಮಾಡಿ ಎಲ್ಲರಿಗೂ ಆರತಿ ಬೆಳಗಿ ಹಬ್ಬದ ಶುಭಾಶಯ ಕೋರಿದರು. ಆರತಿ ಬೆಳಗಿ ಶುಭ ಕೋರಿದ ಕನ್ಯೆಯರಿಗೆ ಮನೆ ಮಂದಿ ಹಣ ನೀಡಿ ಹರಸಿದರು.