ತರೀಕೆರೆ: ಯುವ ಸಮುದಾಯ ಜಾಗೃತಗೊಂಡರೆ ಸಮಾಜದ ಸಂಘಟನೆ ಸುಲಭ ಎಂದು ಚಿತ್ರದುರ್ಗ ಸೀಬಾರ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಅಜ್ಜಂಪುರದಲ್ಲಿ ಶನಿವಾರ ಏರ್ಪಡಿಸಿದ್ದ ಬಂಜಾರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭವ್ಯ ಪರಂಪರೆ, ಶ್ರೀಮಂತ ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜದ ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಬಂಜಾರರ ಕಲೆ ಮತ್ತು ಸಂಸ್ಕೃತಿ ಸಮಾಜಕ್ಕೆ ಮಾದರಿ. ಬಂಜಾರರಷ್ಟೇ ಅಲ್ಲ, ಕ್ಷೇತ್ರದಲ್ಲಿರುವ ಎಲ್ಲ್ಲ ಕೋಮಿನ ಜನರ ಕಲ್ಯಾಣ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುದಾನ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ವಾದ್ಯ, ನೃತ್ಯ ತಂಡದೊಂದಿಗೆ ಅಜ್ಜಂಪುರ ಪ್ರಮುಖ ರಸ್ತೆಯಲ್ಲಿ ಶ್ರೀ ಸಂತ ಸೇವಾಲಾಲ್ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಶ್ರೀ ಶಿವಪ್ರಕಾಶ್ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ನಾಗರಾಜನಾಯ್ಕ, ತಾಪಂ ಮಾಜಿ ಅಧ್ಯಕ್ಷ ಕೀರ‌್ಯಾನಾಯ್ಕ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಡಿ.ಹಾಲಾನಾಯ್ಕ, ಟಿ.ವಿಜಯನಾಯ್ಕ, ತರೀಕೆರೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಟಿ.ಎಂ.ದೇವರಾಜ್, ಶಿಕ್ಷಕ ಟಿ.ಚನ್ನನಾಯ್ಕ ಇತರರಿದ್ದರು.