ಕಳಸ: ಹಿರೇಬೈಲು ಮೋಹಿತ್ ಮೋನಪ್ಪ ನಿರ್ದೇಶನದ ‘ಬಂಗ್ಲೆ ಕ್ರಾಸ್’ ಕಿರುಚಿತ್ರವನ್ನು ಸು ್ರಮ್ ಸೋ ಚಿತ್ರ ನಿರ್ಮಾಪಕ ಬಿ.ವಿ.ರವಿ ರೈ ಬಿಡುಗಡೆಗೊಳಿಸಿದರು.
ಬೈನೆಕಾಡ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರ ಬಿಡುಗಡೆ ಮಾಡಿ ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ಅವರು, ನಿರ್ದೇಶಕ ಮೋಹಿತ್ ಮೋನಪ್ಪ ಸೇರಿದಂತೆ ಹಿರೇಬೈಲು ಆಸುಪಾಸಿನ ಅನೇಕ ಯುವಕರು ನಟಿಸಿರುವ ಬಂಗ್ಲೆ ಕ್ರಾಸ್ ರೋಮಾಂಚನಗೊಳಿಸುತ್ತದೆ. ಈ ಚಿತ್ರ ಸ್ಥಳೀಯ ಜನಜೀವನ, ಸಮಸ್ಯೆ, ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದರು.
ನಿರ್ದೇಶಕ ಮೋಹಿತ್ ಮೋನಪ್ಪ ಮಾತನಾಡಿ, ನಮ್ಮ ಸುತ್ತಲಿನ ಪರಿಸರದಲ್ಲಿ ನಡೆದಿರಬಹುದಾದ ನೈಜ ಘಟನೆ ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ನಮ್ಮ ಗೆಳೆಯರೇ ನಟರು, ಸಹ ನಿರ್ದೇಶಕರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು ಆಗಿದ್ದರಿಂದ ಚಿತ್ರ ನಿರ್ಮಾಣ ತಡವಾದರೂ ತೃಪ್ತಿ ತಂದಿದೆ ಎಂದರು.
ಹಿರೇಬೈಲು ಆಸುಪಾಸಿನಲ್ಲೆ ಬಹುತೇಕ ಚಿತ್ರೀಕರಣ ನಡೆದಿದ್ದು, ಕಾಫಿ ತೋಟವೊಂದರ ಮಾಲೀಕ ಸಂಪತ್ತಿನ ವೃದ್ಧಿಗಾಗಿ ಕಾರ್ಮಿಕ ಸಮುದಾಯದ ಬಡ ಯುವತಿಯರನ್ನು ಅಮಾವಾಸ್ಯೆಯಂದು ಬಲಿ ಕೊಡುವ ಕಥೆ ಇದರಲ್ಲಿದೆ. ಈ ಅನಿಷ್ಟ ಪದ್ಧತಿಯನ್ನು ಊರಿನ ಯುವಕರು ಅರಿತು ತೋಟದ ಮಾಲೀಕನನ್ನೇ ಹತ್ಯೆ ಮಾಡುವುದರೊಂದಿಗೆ ಚಿತ್ರ ಮುಗಿಯುತ್ತದೆ. ದಶಕಗಳ ಹಿಂದೆ ಕರಾವಳಿಯಿಂದ ಮಲೆನಾಡಿಗೆ ಬಂದ ಆದಿದ್ರಾವಿಡ ಸಮುದಾಯದ ಬಹುತೇಕ ನಟರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷವಾಗಿದೆ. ಚಿತ್ರವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ರವಿ ಕೆಳಂಗಡಿ, ಪ್ರೇಮ್ ಸಾಗರ್ ಕಾರಕ್ಕಿ, ರಮೇಶ್ ಸುಂಕಸಾಲೆ, ಮೋಹನ್, ದಿವ್ಯಾ ರವೀಂದ್ರ ಭಟ್, ಬಂಗ್ಲೆ ಕ್ರಾಸ್ ತಂಡದವರು ಹಾಜರಿದ್ದರು.