ಜಿಲ್ಲೆ

ಬಂಗಾರಪೇಟೆಯಲ್ಲಿ ಗರಿಗೆದರಿದ ರಾಜಕೀಯ

Kolar

ಜಿ.ನಾಗರಾಜ್ ಬೂದಿಕೋಟೆ

ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗದಿದ್ದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿ ತಟಸ್ಥವಾಗಿದೆ.
ವಿಧಾನಸಭೆ ಚುನಾವಣೆಗೆ ಎರಡು ತಿಂಗಳು ಬಾಕಿಯಿರುವಾಗಲೇ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಜೆಡಿಎಸ್ ಈಗಾಗಲೇ ಮಲ್ಲೇಶ್ ಮುನಿಸ್ವಾಮಿಯನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭ್ಯರ್ಥಿ ಯಾಗಲಿದ್ದಾರೆ. ಆದರೆ ಬಿಜೆಪಿ ಯಾರನ್ನೂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿಲ್ಲ.
ಕಾಂಗ್ರೆಸ್‌ನಿಂದ ಎಸ್.ಎನ್. ನಾರಾಯಣಸ್ವಾಮಿ ಎರಡು ಬಾರಿ ಶಾಸಕರಾಗಿದ್ದು, ಹ್ಯಾಟ್ರಿಕ್ ಗೆಲುವಿಗಾಗಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಶಾಸಕರು ತಾಯಂದಿರ ಆಶೀರ್ವಾದ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಸ್ವೆಟರ್ ವಿತರಣೆ ಮಾಡಿ ಮಹಿಳೆಯರ ವಿಶ್ವಾಸ ಗಳಿಕೆಗೆ ಮುಂದಾಗಿದ್ದಾರೆ. ಪಂಚಾಯಿತಿ ಮಟ್ಟದಲ್ಲಿ ಬೂತ್ ಮಟ್ಟದ ಸಭೆ ಮತ್ತು ವಿವಿಧ ಸಮುದಾಯಗಳ ಮುಖಂಡರ ಸಭೆಗಳನ್ನು ನಡೆಸಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಶಾಸಕರ ಪರವಾಗಿ ಅವರ ಬೆಂಬಲಿಗರೂ ಬಸ್‌ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆಸುವ ಸಭೆ ಸಮಾರಂಭಗಳಲ್ಲಿ ಒಬ್ಬರ
ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ ಮತಬೇಟೆಗೆ ಮುಂದಾಗಿರುವುದು ನಿಚ್ಚಳ.
ಕಾಂಗ್ರೆಸ್ ಪ್ರಭಾವಿ ಮುಖಂಡ ಕೆ.ಚಂದ್ರಾರೆಡ್ಡಿ ಎಂಎಲ್ಸಿ ಚುನಾವಣೆ ಸಂದರ್ಭದಲ್ಲಿ ಮುನಿಸಿಕೊಂಡು ಜಿಲ್ಲಾಧ್ಯಕ್ಷ ಸ್ಥಾನ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ತೊರೆದ ಅವರಿಗೆ ನಿಗಮ ಅಧ್ಯಕ್ಷ ಸ್ಥಾನ ಕೊಡಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು
ಸಂಸದರು ಹೇಳಿದ್ದರು. ಇದರಿಂದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ನಿಗಮ ಸ್ಥಾನ ಚಂದ್ರಾರೆಡ್ಡಿಗೆ ದಕ್ಕಲಿಲ್ಲ. ಇದರಿಂದ ಕೆ.ಚಂದ್ರಾರೆಡ್ಡಿ ಬೆಂಬಲಿಗರಲ್ಲಿ ತುಸು ಬೇಸರ ವ್ಯಕ್ತವಾಗಿದೆ.
ಪ್ರತಿ ಬಾರಿ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ವಿಳಂಬವಾಗುತ್ತಿದ್ದು ಈ ಬಾರಿಯೂ ಹೈಕಮಾಂಡ್ ಬೇಗ ಅಭ್ಯರ್ಥಿ ಆಯ್ಕೆ ಮಾಡದ ಕಾರಣ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಬಿಜೆಪಿಯಿಂದ ಅಭ್ಯರ್ಥಿಯೂ ಘೋಷಣೆಯಾದರೆ ಕ್ಷೇತ್ರದಲ್ಲಿ ರಾಜಕೀಯ ರಣರಂಗ ಮತ್ತಷ್ಟು ಕುತೂಹಲ ಸೃಷ್ಟಿಸಲಿದೆ.

ಜೆಡಿಎಸ್‌ನಿಂದ ಮನೆ ಮನೆ ಪ್ರಚಾರ: ಹೀಗಿರುವಾಗಲೇ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿ ‘ಮನೆ ಮನೆಗೂ ಮಲ್ಲೇಶಣ್ಣ, ಕರ್ನಾಟಕಕ್ಕೆ ಕುಮಾರಣ್ಣ’ ಎಂಬ ಅಭಿಯಾನ ಕೈಗೊಂಡಿದ್ದಾರೆ. ಅಭಿಯಾನದ ಮೂಲಕ ಕ್ಷೇತ್ರದ ಮನೆ ಮನೆಗೂ ಭೇಟಿ ನೀಡಿ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮಹಿಳೆಯರಿಗೆ ಸೀರೆಯನ್ನು ಉಡುಗೊರೆಯನ್ನಾಗಿ ನೀಡುತ್ತಿದ್ದಾರೆ.

ಬಿಜೆಪಿಯಲ್ಲಿ ಅಭ್ಯರ್ಥಿ ಗೊಂದಲ: ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ, ಇದರಿಂದ ಯಾರು ಅಭ್ಯರ್ಥಿ ಆಗುತ್ತಾರೆ ಎಂಬ ಗೊಂದಲ ಕಾರ್ಯಕರ್ತರಲ್ಲಿ ಉಂಟಾಗಿದೆ. ಸಂಕ್ರಾಂತಿಗೆ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಮುಖಂಡರು ಹೇಳಿಕೊಳ್ಳುತ್ತಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡದ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ರೀತಿಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿಲ್ಲ. ಬೂತ್ ವಿಜಯ ಅಭಿಯಾನ, ಬೂತ್ ಸಮಿತಿ ರಚನೆ ಮಾಡಿ ಮುಗಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಭ್ಯರ್ಥಿ ಯಾರು ಆಗ್ತಾರೆ ಎಂದು ತುದಿಗಾಲಲ್ಲಿ ನಿಂತಿದ್ದಾರೆ.