ಸಾಗರ: ಗಣೇಶ ಚತುರ್ಥಿ, ಈದ್ ಮಿಲಾದ್ ಇನ್ನಿತರ ಕಾರ್ಯಕ್ರಮಗಳಿಗೆ ಫ್ಲೆಕ್ಸ್ ಅಳವಡಿಸುವಾಗ ಪ್ರಚೋದನಾಕಾರಿ ಮುದ್ರಣ ಇರಬಾರದು ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಹೇಳಿದರು.
ಸಾಗರದ ಪೇಟೆ ಠಾಣೆಯಲ್ಲಿ ಶನಿವಾರ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಮುದ್ರಕರೊಂದಿಗೆ ಸಭೆ ನಡೆಸಿದರು. ಅನಗತ್ಯ ವಿವಾದಗಳು ಉಂಟಾಗದಂತೆ ಕ್ರಮವಹಿಸಿ ಎಂದರು.
ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಮುದ್ರಣ ಮಾಡುವಾಗ ಕರಪತ್ರ, ಫ್ಲೆಕ್ಸ್ ಮತ್ತು ಬ್ಯಾನರ್ ಮೇಲೆ ಪ್ರಿಂಟ್ ಮಾಡಿಸಿದವರ ಹೆಸರು ಮತ್ತು ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಫ್ಲೆಕ್ಸ್ ಮತ್ತು ಬ್ಯಾನರ್ ಮೇಲೆ ಯಾ ಕಾರಣಕ್ಕೂ ಇತರೆ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ, ಆಕ್ಷೇಪಾರ್ಹ ಮಾಹಿತಿ, ಚಿತ್ರಗಳನ್ನು ಮುದ್ರಿಸಬಾರದು ಎಂದರು.
ನಿಮ್ಮ ಬಳಿ ಮುದ್ರಣ ನೀಡಿದವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ರಿಜಿಸ್ಟ್ರಾರ್‌ನಲ್ಲಿ ನಮೂದಿಸಬೇಕು. ಈ ಮಾಹಿತಿಯನ್ನು ಸಮೀಪದಲ್ಲಿರುವ ಪೊಲೀಸ್ ಠಾಣೆಗೆ ನೀಡಬೇಕು. ಒಂದೊಮ್ಮೆ ಮುದ್ರಣಕ್ಕೆ ತಂದ ಮಾಹಿತಿ, ಚಿತ್ರಗಳ ಬಗ್ಗೆ ನಿಮಗೆ ಅನುಮಾನ ಇದ್ದರೆ ಪೊಲೀಸರ ಗಮನಕ್ಕೆ ತರಬೇಕು. ಇಲಾಖೆ ನೀಡಿದ ತಿಳಿವಳಿಕೆ ನಡುವೆಯೂ ನೀವು ಪ್ರಮಾದ ಎಸಗಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದರು. ವೃತ್ತ ನಿರೀಕ್ಷಕ ಪೂವಯ್ಯ ರಾಥೋಡ್ ಇತರರಿದ್ದರು.