ಕೊಳ್ಳೇಗಾಲ: ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಬೈಪಾಸ್ ಹೆದ್ದಾರಿ (948)ಯಲ್ಲಿರುವ ಸತ್ತೇಗಾಲ ನೂತನ ಸೇತುವೆ ಮೇಲೆ ಪ್ರವಾಸಿಗರು ವಾಹನಗಳನ್ನು ಪಾರ್ಕಿಂಗ್ ಮಾಡಿ ಫೋಟೋ ಶೂಟ್‌ನೊಂದಿಗೆ ರೀಲ್ಸ್ ಮಾಡುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವುದರ ಜತೆಗೆ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತಿದೆ.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆ ಇದಾಗಿದೆ. ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿ ಸೇತುವೆ ಮೇಲೆ ಕಾರು, ಬೈಕ್, ಆಟೋಗಳನ್ನು ನಿಲ್ಲಿಸಿ ಸೇತುವೆಯ ತಡೆಗೋಡೆ ಏರುವುದು, ಕೂರುವುದು, ರಸ್ತೆ ಬದಿಯಲ್ಲಿ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವುದು ಮಾಡುತ್ತಿದ್ದಾರೆ. ಅಲ್ಲದೆ ಯುವಕ, ಯುವತಿಯರು ಸೇತುವೆ ಬಳಿ ನಿಂತು ರೀಲ್ಸ್ ಮಾಡುತ್ತಿದ್ದಾರೆ. ಸೇತುವೆ ಮೇಲಿನ ಎಡ ಹಾಗು ಬಲ ಭಾಗದಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಶನಿವಾರ, ಭಾನುವಾರ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆಯಾದರೂ ಪ್ರಯೋಜನವಾಗಿಲ್ಲ. ಪೊಲೀಸರು ಮಾತ್ರ ಇತ್ತ ತಿರುಗಿಯೂ ನೋಡುತ್ತಿಲ್ಲ.
ಹೆದ್ದಾರಿಯಾದ ಕಾರಣ ವಾಹನಗಳು ವೇಗವಾಗಿ ಚಲಿಸುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸೇತುವೆ ಮೇಲೆ ನಿಂತಿರುವ ವಾಹನಗಳು ಹಾಗೂ ಜನರಿಗೆ ಡಿಕ್ಕಿ ಹೊಡೆಯುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಪೊಲೀಸರು ಸೇತುವೆ ಮೇಲೆ ವಾಹನಗಳನ್ನು ನಿಲ್ಲಿಸುವವರಿಗೆ ದಂಡದ ಬಿಸಿ ಮುಟ್ಟಿಸುವುದರ ಜತೆಗೆ ಸೆಲ್ಫಿ, ರೀಲ್ಸ್ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳುವವರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕೆಂಬುದು ಸ್ಥಳೀಯರ ಒತ್ತಾಯ.
ಅಪಾಯದ ನಡುವೆಯೂ ದುಸ್ಸಾಹಸ
ಕಾವೇರಿ ಕಣಿವೆಯಲ್ಲಿ ಅಧಿಕ ಮಳೆಯಾಗುತ್ತಿದ್ದು, ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಪರಿಣಾಮ ತಾಲೂಕಿನ ಭರಚುಕ್ಕಿ ಹಾಗೂ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ. ಶಿವನಸಮುದ್ರದ ಸುತ್ತಮುತ್ತಲಿನ ಬೆಟ್ಟ-ಗುಡ್ಡ ಹಸಿರುಮಯವಾಗಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ನಡುವೆ ಬೈಪಾಸ್ ರಸ್ತೆ ನಿರ್ಮಾಣವಾದ ಬಳಿಕ ಹೊಸ ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿದ್ದು, ಸೇತುವೆ ಕೆಳಗೆ ಕಾವೇರಿ ನದಿ ಹರಿಯುತ್ತದೆ. ಪಕ್ಕದಲ್ಲಿಯೆ ಜವನಗಳ್ಳಿ ಬೆಟ್ಟವಿದ್ದು, ಪ್ರಾಕೃತಿಕ ಸೌಂದರ್ಯ ನೋಡಲು ವೀಕೆಂಡ್‌ನಲ್ಲಿ ಬರುವವರು ಫೋಟೊ, ರೀಲ್ಸ್‌ನಂತಹ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಎಐ ಕ್ಯಾಮರಾ ಅಳವಡಿಸಿ ರಾಷ್ಟ್ರೀಯ ಹೆದ್ದಾರಿ (948) ಬೈಪಾಸ್ ರಸ್ತೆಯಾದ ಬಳಿಕ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಬೈಪಾಸ್ ರಸ್ತೆಯಿಂದ ದಾಸನಪುರ, ಹರಳೆ, ನರೀಪುರ, ಸತ್ತೇಗಾಲ, ಹ್ಯಾಂಡ್‌ಪೋಸ್ಟ್ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಜಂಕ್ಷನ್‌ಗಳು ಅಪಘಾತದ ಹಾಟ್ ಸ್ಟಾಟ್ ಆಗಿದೆ. ಜಂಕ್ಷನ್‌ನಲ್ಲಿ ವಿದ್ಯುತ್ ದೀಪದ ವ್ಯವಸೆ ಇಲ್ಲದಿರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಒಂದೂವರೆ ತಿಂಗಳ ಅಂತರದಲ್ಲಿ ಸತ್ತೇಗಾಲ ಬೈಪಾಸ್‌ನಲ್ಲಿ ನಡೆದ ಅಪಘಾತದಲ್ಲಿ 4 ಜನರು ಮೃತಪಟ್ಟಿದ್ದಾರೆ. ಸೇತುವೆ ಮೇಲೆ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡುವವರ ವಿರುದ್ಧ ಕ್ರಮ ವಹಿಸುವುದರ ಜತೆಗೆ ಸೇತುವೆ ಮೇಲೆ ಅನಾಹುತವಾಗದಂತೆ ಕ್ರಮ ವಹಿಸಬೇಕಿದೆ. ಸೇತುವೆ ಮೇಲೆ ಎಐ ಕ್ಯಾಮರಾ (ಕೃತಕಬುದ್ಧಿ ಮತ್ತೆ) ಅಳವಡಿಸಿದರೆ ಸೇತುವೆ ಮೇಲಿನ ಚಲನವಲನಗಳ ಬಗ್ಗೆ ನಿಗಾವಹಿಸಬಹುದು. ಜತೆಗೆ ಕ್ಯಾಮರಾ ಮೂಲಕವೇ ವಾಹನಗಳ ಸಂಖ್ಯೆ, ವಿಳಾಸ ಪತ್ತೆ ಮಾಡಿ ದಂಡ ಪ್ರಯೋಗ ಮಾಡಬಹುದಾಗಿದೆ. ಮುಂದಾಗುವ ಅನಾಹುತ ತಪ್ಪಿಸಬಹುದು ಎಂಬುದು ನಾಗರಿಕರ ಅಭಿಪ್ರಾಯ.
ಪ್ರವಾಸಿಗರು ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು. ಸೇತುವೆ ಮೇಲೆ ವಾಹನಗಳನ್ನು ನಿಲ್ಲಿಸಿ ಫೋಟೋ ಶೂಟ್ ಮತ್ತು ರೀಲ್ಸ್ ಮಾಡುವುದು ಗಮನಕ್ಕೆ ಬಂದಿದೆ. ವಾಹನಗಳನ್ನು ನಿಲ್ಲಿಸದಂತೆ ಕ್ರಮವಹಿಸಲು ಚೀತಾ ಬೀಟ್ ವಾಹನವನ್ನು ಸಿಬ್ಬಂದಿ ನಿಯೋಜಿಸಿ ಗಸ್ತು ಮಾಡಿಸಲಾಗುತ್ತದೆ. ಸೇತುವೆ ಮೇಲೆ ನಿಲುಗಡೆಗೊಳ್ಳುವ ವಾಹನಗಳ ಮೇಲೆ ನಿಗಾ ವಹಿಸುವುದರ ಜತೆಗೆ ದಂಡ ಪ್ರಯೋಗ ಮಾಡಲು ಎಐ ಕ್ಯಾಮರಾಗಳನ್ನು ಸೇತುವೆ ಮೇಲೆ ಅಳವಡಿಸಲು ಚಿಂತನೆ ಮಾಡಲಾಗಿದೆ. ಬಿ.ಟಿ.ಕವಿತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ಸತ್ತೇಗಾಲ ಸಮೀಪದ ಹೊಸ ಸೇತುವೆ ಮೇಲೆ ಪ್ರವಾಸಿಗರು ಫೋಟೋ, ರೀಲ್ಸ್ ಮಾಡುತ್ತಿದ್ದಾರೆ. ಸೇತುವೆ ಮೇಲೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಬೈಪಾಸ್ ರಸ್ತೆ ಆದ ಬಳಿಕ ಅಪಘಾತ ಹೆಚ್ಚಾಗಿದೆ. ಅತಿವೇಗ, ಅಜಾಗರೂಕತೆ ವಾಹನ ಚಾಲನೆಯಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಸೇತುವೆ ಮೇಲೆ ನಿಲುಗಡೆ ಮಾಡುವ ವಾಹನಗಳ ಮೇಲೆ ದಂಡ ವಿಧಿಸಬೇಕು.ಕ್ಯಾಮರಾ ಅಳವಡಿಸಿ ನಿಗಾ ವಹಿಸಬೇಕು. ಶಶಿಕುಮಾರ್ ಸತ್ತೇಗಾಲ ನಿವಾಸಿ