ಜಿಲ್ಲೆ

ಫೈಲ್ ಕಳುವಾಗಿದ್ದರೆ ಎಫ್‌ಐಆರ್ ದಾಖಲಿಸಿ: ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಎಂ. ಪ್ರಸಾದ್ ತಾಕೀತು

ಮೈಸೂರು: ಅಧಿಕಾರಿಗಳು ಮಾಹಿತಿ ಲಭ್ಯ ಇಲ್ಲ ಎಂದು ಹೇಳಬಾರದು. ಫೈಲ್ ಕಳುವಾಗಿದ್ದರೆ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಎಂ. ಪ್ರಸಾದ್ ಖಡಕ್ ಆಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮದ ಅನುಷ್ಠಾನ ಕುರಿತು ಸಭೆಯಲ್ಲಿ ಮಾತನಾಡಿದರು.

ಮಾಹಿತಿ ಕೊಡುತ್ತೀರಾ ಅಥವಾ ದಂಡ ಕಟ್ಟುತ್ತೀರಾ ಎಂಬುದನ್ನು ಅಧಿಕಾರಿಗಳು ಯೋಚಿಸಬೇಕು. ದಂಡ ಹಾಕಿ ಎರಡ್ಮೂರು ವರ್ಷ ಕಳೆದರೂ ಮಾಹಿತಿ ಸಿಕ್ಕಿಲ್ಲದಂತಹ ಪ್ರಕರಣಗಳು ಆಯೋಗದ ಮುಂದಿವೆ. ಈ ರೀತಿ ಆಗಬಾರದು ಎಂದು ತಿಳಿಸಿದರು.

ಯಾವುದೇ ಇಲಾಖೆಯೂ ಸಾಮಾನ್ಯವಾಗಿ ಶೇ. 60 ಮಾಹಿತಿಯನ್ನು ಇಟ್ಟುಕೊಂಡಿದ್ದರೆ ಶೇ. 60 ಅರ್ಜಿಗಳು ವಿಲೇವಾರಿಯಾಗುತ್ತವೆ. ಆರ್‌ಟಿಐ ಕಾಯ್ದೆ ಬಗ್ಗೆ ಈಗಲೂ ಜನರಿಗೆ ನಂಬಿಕೆ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿ ಸಲ್ಲಿಸಿರುವ 1125 ಅರ್ಜಿಗಳು ಬಾಕಿ ಇದೆ. ಶೀಘ್ರ ವಿಲೇವಾರಿ ಮಾಡಬೇಕು ಎಂದು ನಿರ್ದೇಶಿಸಿದರು.

ಸ್ಥಳೀಯ ಮಟ್ಟದಲ್ಲೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕೆಡಿಪಿ ಸಭೆಗಳಲ್ಲಿ ಆರ್‌ಟಿಐ ಅರ್ಜಿ ವಿಲೇವಾರಿಗೆ 10 ನಿಮಿಷ ಮೀಸಲಿಟ್ಟರೆ ಹಲವು ಅರ್ಜಿಗಳನ್ನು ಇತ್ಯರ್ಥ ಮಾಡಬಹುದಾಗಿದೆ ಎಂದರು.

ಮೈಸೂರು ಅರಮನೆ ಆಡಳಿತ ಮಂಡಳಿ ಬಗ್ಗೆ ಮಾಹಿತಿ ಕೇಳಿ ಅನೇಕ ಅರ್ಜಿಗಳು ಆಯೋಗಕ್ಕೆ ಬರುತ್ತಿವೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಅರ್ಜಿಗಳು ಸ್ವೀಕೃತವಾಗಿವೆ. ಸೆಂಚುರಿ ಕ್ಲಬ್, ನಿರ್ಮಿತಿ ಕೇಂದ್ರ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳು ಬಾಕಿ ಇವೆ. ಅವುಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಆರ್‌ಟಿಐ ಕಾಯ್ದೆ ಜಾರಿಗೊಂಡು ಇದೇ ವರ್ಷ 20 ವರ್ಷ ಆಗಲಿದೆ. ಈ ಕಾಯಿದೆಯಿಂದ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಅನುಕೂಲ ಆಗುತ್ತಿಲ್ಲ ಎಂಬ ಅಭಿಪ್ರಾಯವಿದೆ.ಇದು ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

10 ರೂ. ಪಾವತಿಸಿ ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ ಮಾಹಿತಿ ಕೊಡಲೇಬೇಕು. ಅಧಿಕಾರಿಗಳು ಅರ್ಜಿ ವಿಲೇವಾರಿಗೆ ಆದ್ಯತೆ ಕೊಡಬೇಕು. ದೇಶದಲ್ಲಿ 60 ಲಕ್ಷ ಅರ್ಜಿಗಳು ಬಾಕಿ ಇವೆ. ರಾಜ್ಯದಲ್ಲಿ 6 ಲಕ್ಷ ಅರ್ಜಿಗಳಿವೆ ಎಂದರು.

ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿರುವ 89 ಸಾರ್ವಜನಿಕ ಪ್ರಾಧಿಕಾರಗಳಿಂದ 50 ಸಾವಿರ ಪ್ರಕರಣಗಳಿದ್ದವು. ಏಳೆಂಟು ತಿಂಗಳಲ್ಲಿ 10 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಮಾಹಿತಿ ಕೊಟ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ ಆಯೋಗದ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ಸೂಚಿಸಿದರು.

ಪಬ್ಲಿಕ್ ರೆಕಾರ್ಡ್ಸ್ ಸಂರಕ್ಷಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ. ರೆಕಾರ್ಡ್ಸ್ ಇಲ್ಲವೆಂದು ಹೇಳಬಾರದು. ಶಾಶ್ವತವಾಗಿ ರೆಕಾರ್ಡ್ಸ್ ಇರಬೇಕು. ಮಾಹಿತಿ ಮುಚ್ಚಿಡುವುದು ಅನುಮಾನಗಳಿಗೆ ಎಡೆಮಾಡುತ್ತದೆ. ಕಡ್ಡಾಯವಾಗಿ ಮಾಹಿತಿ ಕೊಡಬೇಕು. ಆಯೋಗದ ಪ್ರಕಟಣೆಗಳು, ನ್ಯಾಯಾಲಯದ ತೀರ್ಪುಗಳನ್ನು ಕಾಲ ಕಾಲಕ್ಕೆ ಅಧಿಕಾರಿಗಳು ಓದಿಕೊಳ್ಳಬೇಕು ಎಂದರು.

ಆರ್‌ಟಿಐ ಬಹಳ ಸರಳವಾದ ಗಂಭೀರವಾದ ಕಾಯ್ದೆಯಾಗಿದೆ. ಅಧಿಕಾರಿಗಳು 31 ಕಾಲಂಗಳಲ್ಲಿ 5ರಿಂದ 6 ಕಾಲಂಗಳನ್ನು ಅರ್ಥ ಮಾಡಿಕೊಂಡರೆ ಸಾಕು. 2ಎಫ್, 2ಜೆ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇರಬೇಕು.

ಅಧಿಕಾರಿಗಳು ಆರ್‌ಟಿಐ ಅರ್ಜಿಗೆ ಭಯಪಡಬೇಕಿಲ್ಲ. ಸಾಮಾನ್ಯರು ಕೇಳಿದ ಮಾಹಿತಿಯನ್ನು ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಅಧಿಕಾರಿಶಾಹಿಯ ಪಾತ್ರ ಹಿರಿದಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಸಾರ್ವಜನಿಕ ದಾಖಲೆಯು ರಹಸ್ಯವಾದ ಮಾಹಿತಿ ಏನಲ್ಲ. ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದವರಿಗೆ ಅಗತ್ಯ ಮಾಹಿತಿ ಕೊಡಬೇಕಾಗುತ್ತದೆ. ಅರ್ಜಿಗಳ ವಿಲೇವಾರಿ ಮಾಡಲು ತಡಮಾಡುವುದಿಲ್ಲ. ಮೈಸೂರಿಂದ ಆಯೋಗದ ತನಕ ಯಾವುದೇ ಅರ್ಜಿಗಳು ಬರದಂತೆ ಅರ್ಜಿ ಇತ್ಯರ್ಥ ಮಾಡುತ್ತೇವೆ ಎಂದು ತಿಳಿಸಿದರು.

ಜಿಪಂ ಸಿಇಒ ಯುಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಡಿಸಿಪಿ ಬಿಂದುಮಣಿ, ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಮುಂತಾದವರು ಭಾಗವಹಿಸಿದ್ದರು.

ಆರ್‌ಟಿಐ ಅಡಿ ಮಾಹಿತಿ ಕೊಡಲು ಅಧಿಕಾರಿಗಳು ಭಯ ಪಡಬೇಕಿಲ್ಲ. ವೈಯಕ್ತಿಕ ಮಾಹಿತಿ, ತನಿಖೆಯ ಹಂತದಲ್ಲಿರುವ ಮಾಹಿತಿ, ಸರ್ಕಾರಕ್ಕೆ ಸಲ್ಲಿಕೆಯಾಗದಿರುವ ಆಡಿಟ್ ವರದಿಯನ್ನು ನೀಡಬೇಕಿಲ್ಲ. ಮಾಹಿತಿ ನೀಡುವ ಬಗ್ಗೆ ಅನುಮಾನಗಳಿದ್ದರೆ ಹಿರಿಯ ಅಧಿಕಾರಿಗಳಿಂದ ಸಲಹೆ ಪಡೆಯಬೇಕು. ಕಾನೂನು ತಜ್ಞರ ಸಲಹೆ ಪಡೆಯಬೇಕು.

ಎ.ಎಂ.ಪ್ರಸಾದ್, ಮುಖ್ಯ ಮಾಹಿತಿ ಆಯುಕ್ತ

1950ರಲ್ಲಿ ಸಂವಿಧಾನ ಜಾರಿಗೆ ಬಂದಿತು. 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿತು. ಅದಕ್ಕೂ ಮೊದಲು ಕರ್ನಾಟಕದಲ್ಲಿ ಮಾಹಿತಿ ಹಕ್ಕು ಕಾಯ್ದೆ ಇತ್ತು. ಸ್ವಾತಂತ್ರೃ ಪೂರ್ವದಲ್ಲಿಯೇ ಪ್ರಜಾಪ್ರತಿನಿಧಿ ಸಭೆ, ಮಿಲ್ಲರ್ ಸಮಿತಿಯನ್ನು ರಚಿಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ.

ಡಾ.ಹರೀಶ್‌ಕುಮಾರ್, ರಾಜ್ಯ ಮಾಹಿತಿ ಆಯುಕ್ತ