ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯಡಿ ಬೆಂಕಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕೈಗೊಂಡಿರುವ ಫೈರ್‌ಲೈನ್ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಡ್ರೋನ್ ಕ್ಯಾಮರಾ ಮೂಲಕ ಕಣ್ಗಾವಲು ಆರಂಭಿಸಿದೆ.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಡಿಸೆಂಬರ್ ತಿಂಗಳ ಮೊದಲನೇ ವಾರದಿಂದಲೇ ಫೈರ್‌ಲೈನ್ ಕಾರ್ಯ ಆರಂಭಿಸಲಾಗಿತ್ತು. ಈಗಾಗಲೇ ಮೂರು ವಲಯಗಳ ಎಲ್ಲ 13 ವಲಯಗಳಲ್ಲಿ ಫೈರ್‌ಲೈನ್ ನಿರ್ಮಾಣ ಭರದಿಂದ ಸಾಗಿದೆ.
ಈ ಬಾರಿ ಉತ್ತಮ ಮಳೆಬಿದ್ದ ಪರಿಣಾಮ ಅರಣ್ಯ ಪ್ರದೇಶದಲ್ಲಿ ಹುಲ್ಲು ಇನ್ನೂ ಹಸಿರಾಗಿಯೇ ಇದೆ. ಅಲ್ಲದೇ, ಸೈಕ್ಲೋನ್‌ನಿಂದ ಅರಣ್ಯ ಪ್ರದೇಶಕ್ಕೆ ಆಗಾಗ್ಗೆ ಮಳೆ ಬೀಳುತ್ತಿದ್ದುದ್ದರಿಂದ ಹುಲ್ಲು ಪೂರ್ಣವಾಗಿ ಒಣಗಿಲ್ಲ. ಆದರೂ ನಿಗದಿತ ಸ್ಥಳಗಳಲ್ಲಿ 2500 ಕಿಲೋಮೀಟರ್ ಉದ್ದಕ್ಕೆ ಬೆಂಕಿ ಹರಡದಂತೆ ಮಾಡಲು ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ಸ್ವಲ್ಪ ಒಣಗಿದ ನಂತರ ಜನವರಿ ಮೊದಲ ವಾರದಲ್ಲಿ ಸುಟ್ಟುಹಾಕಲಾಗುತ್ತದೆ.
ಜನರು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡುವುದನ್ನು ಪತ್ತೆಹಚ್ಚಲು ಸದ್ಯ ಬಂಡೀಪುರದಲ್ಲಿರುವ ಡ್ರೋನ್ ಕ್ಯಾಮರಾವನ್ನು ಕಾಡಂಚಿನಲ್ಲಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಿಗೂ ಡ್ರೋನ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರು ಅರಣ್ಯದೊಳಗೆ ಅಕ್ರಮವಾಗಿ ಹೋಗುವುದನ್ನು ಪತ್ತೆ ಹಚ್ಚಲು ಸದ್ಯ ಕಾಡಂಚಿನಲ್ಲಿ ಡ್ರೋನ್ ಕಣ್ಗಾವಲು ಹಾಕಲಾಗಿದೆ. ಪ್ರತಿ ವಲಯಕ್ಕೂ ಒಂದೊಂದು ಡ್ರೋನ್ ಖರೀದಿಸಿದರೆ ಬೇಸಿಗೆ ಸಂದರ್ಭದಲ್ಲಿ ಕಣ್ಗಾವಲು, ಅತಿಕ್ರಮ ಪ್ರವೇಶ ಹಾಗೂ ಕಳ್ಳಬೇಟೆ ನಿಗ್ರಹಿಸಲು ಸಾಧ್ಯವಿದೆ. ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಪ್ರತಿ ವಲಯಕ್ಕೂ ಅಗ್ನಿಶಾಮಕ ವಾಹನ ಪಡೆಯಲು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಾಹನದಲ್ಲಿ ಥರ್ಮಲ್ ಡ್ರೋನ್ ಕ್ಯಾಮರಾ, ಹೆಲ್ಮೆಟ್, ಬಟ್ಟೆಗಳು ಸೇರಿದಂತೆ ಬೆಂಕಿ ನಂದಿಸಲು ಅಗತ್ಯವಾದ ಉಪಕರಣಗಳು ಇರುವುದರಿಂದ ಬೆಂಕಿ ನಿರ್ವಹಣೆ ಸುಲಭವಾಗಲಿದೆ.
ಡಾ.ರಮೇಶ್‌ಕುಮಾರ್, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ