ಚನ್ನರಾಯಪಟ್ಟಣ: ಫೆ.20 ರಂದು ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡದಿದ್ದರೆ ರೈತರ ಕಬ್ಬನ್ನು ಚಾಮುಂಡೇಶ್ವರಿ ಶುಗರ್ಸ್ ಸಂಸ್ಥೆ ಖರೀದಿ ಮಾಡಬೇಕಾಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆಗ್ರಹಿಸಿದರು.
ತಾಲೂಕಿನ ಶ್ರೀನಿವಾಸಪುರ ಬಳಿಯಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ 17 ಕೋಟಿ ರೂ. ಭೋಗ್ಯದ ಹಣ ನೀಡಬೇಕಿದ್ದು, ಶಾಸಕರು ಕೇವಲ ಆರು ಕೋಟಿ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದ್ದಾರೆ, ಹಾಗಾದರೆ ಉಳಿದ 11 ಕೋಟಿ ರೂ. ಏನಾಯಿತು ಎಂದು ಪ್ರಶ್ನಿಸಿದರು.
ಸೋಮವಾರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡುವುದಾಗಿ ತಹಸೀಲ್ದಾರರ ಮೂಲಕ ಪತ್ರ ರವಾನಿಸಲಾಗಿತ್ತು, ಆದರೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಅವರ ಗಮನಕ್ಕೆ ಬಂದರೂ ಕಾರ್ಖಾನೆಯಲ್ಲಿ ಉಳಿಯದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಕ್ರಮ ಜರುಗಿಸಲು ಒತ್ತಾಯಿಸಲಾಗುವುದು ಎಂದರು.
ಎಪಿಎಂಸಿ ನಿರ್ದೇಶಕ ಎಂಶಂಕರ್, ತಾಲೂಕು ಪಂಚಾಯಿತಿ ಅಧ್ಯಕ್ಷ ಇಂದಿರಾ ರಾಮಣ್ಣ, ಉಪಾಧ್ಯಕ್ಷ ಗಿರೀಶ್, ಕಾರ್ಖಾನೆಯ ಉನ್ನತ ಅಧಿಕಾರಿ ನಾಗರಾಜ್ ಹಾಗೂ ಇತರರಿದ್ದರು.