ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಬಾಗಲಕೋಟೆ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಬಿ.ಆರ್.ಕಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಶೋಕ ಬಿಜ್ಜಳ, ಸಂಗನಗೌಡ ಪಾಟೀಲ, ಮಹಾಂತೇಶ ಹಳ್ಳೂರ, ಶರಣಬಸಯ್ಯ ಮಠ ಉಪಸ್ಥಿತರಿದ್ದರು. 
ಜಿಲ್ಲೆ

ಫೆ.೧೫ ರಂದು ಔಷಧ ವ್ಯಾಪಾರಸ್ಥರಿಂದ ಬೃಹತ್ ಆಂದೋಲನ

ಬಾಗಲಕೋಟೆ: ಕಾರ್ಪೋರೇಟ್‌ಗಳು ಮಾಡುತ್ತಿರುವ ಅಸಹಜ ಬೆಲೆ ಪೈಪೋಟಿಯನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಫೆ.೧೫ ರಂದು ಜಿಲ್ಲಾಡಳಿತದ ಮುಂದೆ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಬಿ.ಆರ್.ಕಟ್ಟಿ ಹೇಳಿದರು.
ಕಾನೂನು ಬಾಹಿರ-ಇ ಫಾರ್ಮಸಿಗೆ ವಿರೋಧವಿದೆ. ಮಾದಕ ಔಷಧಗಳು ಯುವಕರಿಗೆ ಸಿಗದಂತೆ ನಿಲ್ಲಿಸಲು, ಅಸಹಜ ಪೈಪೋಟಿ ಮಾಡುವ ಬೃಹತ್ ಕಂಪನಿಗಳ ಮುಖವಾಡ ಕಳಚಲು, ನಕಲಿ ಔಷಧ ಹರಡುವಿಕೆಯನ್ನು ತಡೆಗಟ್ಟುವುದು, ಸಣ್ಣ ಪುಟ್ಟ ಔಷಧ ವ್ಯಾಪಾರಿಗಳನ್ನು ರಕ್ಷಿಸಲು ಮತ್ತು ಸಾರ್ವಜನಿಕರಿಗೆ ನೈಜ ವಿಷಯ ತಿಳಿಸಲು ಈ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆಯ ಮೂಲಕ ಸರ್ಕಾರಿ ಯಂತ್ರಗಳ ಗಮನ ಸೆಳೆಯಲು ಹಲ್ಲಾ ಬೋಲ್ ಕರೆ ನೀಡಿದೆ. ಫೆ.೧೫ ರಂದು ಬೆಳಗ್ಗೆ ೧೦ ರಿಂದ ೧೨ ಗಂಟೆಯವರೆಗೆ ಔಷಧ ಅಂಗಡಿಗಳನ್ನು ಬಂದ್ ಮಾಡಲಾಗುವುದು. ೧೦ ಗಂಟೆಯಿಂದ ೧೧ ಗಂಟೆಯವರೆಗೆ ಗಂಟೆ ಬಾರಿಸುವ, ತಾಟು ಬಾರಿಸುವ , ಶಂಖ ಊದುವ, ಧ್ವನಿ ಎತ್ತರಿಸಿ ಘೋಷಣೆ ಕೂಗುವ ಮೂಲಕ ಎಲ್ಲ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ದೇಶದಲ್ಲಿ ಔಷಧ ವ್ಯಾಪಾರಿಗಳು ಕಳೆದ ೮೦ ರಿಂದ ೧೦೦ ವರ್ಷಗಳಿಂದ ಸಾರ್ವಜನಿಕರಿಗೆ ಜೀವರಕ್ಷಕ ಔಷಧಗಳನ್ನು ಸರಿಯಾದ ಸಮಯಕ್ಕೆ ತಲುಪಿಸುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿಯೂ ಜೀವನದ ಹಂಗು ತೊರೆದು ಲಕ್ಷಾಂತರ ಪ್ರಾಣಗಳನ್ನು ಉಳಿಸಿದ್ದೇವೆ. ಕೆಲವು ವರ್ಷಗಳಿಂದ ಕಾನೂನುಬಾಹಿರ ಎ-ಫಾರ್ಮಸಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಇವರಿಂದ ಯುಕವರು ಮಾದಕ ವಸ್ತುಗಳ ದಾಸರಾಗಲು ಪ್ರತ್ಯಕ್ಷ ಕಾರಣವಾಗಿವೆ. ಔಷಧ ಬೆಲೆ ಮೌಲ್ಯಗಳನ್ನು ಕಡಿಮೆ ಮಾಡಿ ಸಣ್ಣ ಪುಟ್ಟ ವಹಿವಾಟುದಾರರ ಬಾಗಿಲು ಮುಚ್ಚುವಂತೆ ಮಾಡುತ್ತಿರುವುದನ್ನು ಖಂಡಿಸಿದರು.
ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಶೋಕ ಬಿಜ್ಜಳ, ಸಂಗನಗೌಡ ಪಾಟೀಲ, ಮಹಾಂತೇಶ ಹಳ್ಳೂರ, ಶರಣಬಸಯ್ಯ ಮಠ ಉಪಸ್ಥಿತರಿದ್ದರು.