ಹಾಸನ: ಇತ್ತೀಚಿನ ದಿನಗಳಲ್ಲಿ ರಾಜ್ಯದ ದೇವಾಲಯಗಳ ಅರ್ಚಕರು ಅನೇಕ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ ನಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.7ರ ಬುಧವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರು ಟೌನ್ ಹಾಲ್ ಸಮೀಪ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್ ತಿಳಿಸಿದರು.
ರಾಜ್ಯದ ಹಿಂದು ದೇವಾಲಯಗಳ ಅರ್ಚಕರಿಗೆ ಸರ್ಕಾರ 5000 ರೂ. ಗೌರವಧನ ನೀಡುತ್ತಿದ್ದು, ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಈ ಹಿಂದೆ ಅರ್ಚಕರಿಗೆ ಸಾವಿರಾರು ಎಕರೆ ಜಮೀನು ನೀಡಲಾಗಿತ್ತು. ಬಳಿಕ ಅವೆಲ್ಲವನ್ನೂ ಸರ್ಕಾರ ವಾಪಸ್ ಪಡೆದಿದೆ. ಮಂಗಳಾರತಿ ತಟ್ಟೆಯ ಹಣದಿಂದ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರವು ನೀಡುತ್ತಿರುವ ಗೌರವಧನವನ್ನು ಕನಿಷ್ಠ 10 ಸಾವಿರ ರೂ.ಗೆ ಏರಿಕೆ ಮಾಡಬೇಕು. ನಿವೃತ್ತಿ ನಿಯಮ ರದ್ದು ಸೇರಿದಂತೆ ನಮ್ಮ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಮ್ಮ ಒಕ್ಕೂಟ ಹಾಗೂ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘದ ಸಹಭಾಗಿತ್ವದೊಂದಿಗೆ ಈ ಸಮಾವೇಶ ಘಂಟಾನಾದ ಶೀರ್ಘಿಕೆ ಭಾಗ 2 ಹೆಸರಿನಲ್ಲಿ ಆಯೋಜಿಸಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಧ್ಯಕ್ಷ ವೆಂಕಟಾಚಲಯ್ಯ, ಶ್ರೀನಿವಾಸ್, ಹಾಸನ ಜಿಲ್ಲಾ ಅಧ್ಯಕ್ಷ ಸೋಮಶೇಖರಯ್ಯ, ಸಂತೋಷ್, ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.