ಜಿಲ್ಲೆ

ಫೆ.6 ರಂದು ಉಳವಿ ಮಹಾ ರಥೋತ್ಸವ -ಈ ಬಾರಿ ಚಕ್ಕಡಿಗಿಲ್ಲ ಅವಕಾಶ

ವಿಜಯವಾಣಿ ಸುದ್ದಿಜಾಲ ಕಾರವಾರ
ಉಳವಿ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಲಂಪಿಸ್ಕಿನ್ ರೋಗದ ಕರಿನೆರಳು ಬಿದ್ದಿದೆ. ಪ್ರತಿ ವರ್ಷ ಜಾತ್ರೆಗೆ ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ಭಕ್ತರು ಎತ್ತಿನಗಾಡಿಗಳಲ್ಲಿ ಬರುತ್ತಿದ್ದರು. ಇದು ಚಕ್ಕಡಿ ಜಾತ್ರೆ ಎಂದೇ ಪ್ರಸಿದ್ಧವಾಗಿತ್ತು. ಆದರೆ, ಈ ಬಾರಿ ಜಾನುವಾರುಗಳಿಗೆ ಗಂಟು ರೋಗ (ಲಂಪಿ ಸ್ಕಿನ್) ಉಲ್ಬಣಿಸಿದ್ದರಿಂದ ಜಾನುವಾರುಗಳು ಒಟ್ಟಿಗೆ ಸೇರುವುದನ್ನು ನಿಷೇಽಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ರೈತರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಜಾತ್ರೆಗೆ ಎತ್ತುಗಳಿಲ್ಲದೇ ಬಂದು ಭಾಗವಹಿಸುವಂತೆ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿನಂತಿಸಿದ್ದಾರೆ.
ಎತ್ತು ಎಂದರೆ ಬಸವಣ್ಣ. ಇತ್ತೀಚೆಗೆ ಲಂಪಿ ಸ್ಕಿನ್ ರೋಗಕ್ಕೆ ಉಳವಿಯಲ್ಲೇ ಒಂದು ಎತ್ತು ಬಲಿಯಾಗಿದೆ. ಇದರಿಂದ ಜಾತ್ರೆಗೆ ಬಂದ ಇತರ ಜಾನುವಾರುಗಳಿಗೂ ರೋಗ ಹರಡುವುದು ಬೇಡ. ನಾವು ಇದೇ ಮೊದಲ ಬಾರಿಗೆ ಈ ಘಟ್ಟಿ ನಿರ್ಧಾರ ತೆಗೆದುಕೊಂಡಿದ್ದೇವೆ. ಜಾತ್ರೆಗೆ ಬರುವ ಊರುಗಳಲ್ಲಿ ಈ ಬಗ್ಗೆ ಕರಪತ್ರ ಹೊರಡಿಸಿದ್ದೇವೆ. ಬ್ಯಾನರ್‌ಗಳನ್ನು ಹಾಕಿಸಿದ್ದೇವೆ ಎಂದರು. ಜಾತ್ರೆಯಲ್ಲಿ ಬರುವವರಿಗೆ ದಾಸೋಹ, ವಸತಿ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದಿಂದ 7 ಕೋಟಿ ರೂ. ವೆಚ್ಚದಲ್ಲಿ ರಥಬೀದಿಗೆ ಕಾಂಕ್ರಿಟ್ ಹಾಗೂ ಇಂಟರ್‌ಲಾಕ್ ಅಳವಡಿಸಲಾಗಿದೆ. ರಥೋತ್ಸವದ ವೇಳೆ ಜನದಟ್ಟಣೆ ಉಂಟಾಗುವುದರಿAದ ಆ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಹಾಕಲು ಅವಕಾಶ ನೀಡುವುದಿಲ್ಲ ಎಂದು ಮಾಹಿತಿ ನೀಡಿದರು.
ಜಾತ್ರೆಯ ಕಾರ್ಯಕ್ರಮಗಳು:
ಜ.28 ರಿಂದ ಫೆ.8 ರವರೆಗೆ ಜಾತ್ರೆಜರುಗಲಿದ್ದು, ಫೆ.6 ರಂದು ಸಾಯಂಕಾಲ 4 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ಮುಜರಾಯಿ ಹಾಗೂ ವಕ್ಪ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಥಕ್ಕೆ ಪೂಜೆ ಮಾಡಿ ಚಾಲನೆ ನೀಡುವರು. ಶಾಸಕ ಆರ್.ವಿ.ದೇಶಪಾಂಡೆ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಈಶ್ವರ ಕುಮಾರ ಕಂದೂ, ಎಸ್‌ಪಿ ಎನ್.ವಿಷ್ಣುವರ್ಧನ ಅತಿಥಿಗಳಾಗಿರುವರು ಎಂದು ಚನ್ನಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ತಿಳಿಸಿದರು.
ಜ.28 ರಂದು ಬೆಳಗ್ಗೆ 7 ಗಂಟೆಗೆ ಷಟಸ್ಥಲ ಧ್ವಜಾರೋಹಣ, ರಾತ್ರಿ 8 ಗಂಟೆಗೆ ರಥಕ್ಕೆ ಪೂಜೆ ಜರುಗಲಿದೆ. ಜ.29 ರಂದು ಅಷ್ಟಮಿ ಪಲ್ಲಕ್ಕಿ ಉತ್ಸವ, ಜ. 30 ರಂದು ಭೂಮಿ ಪೂಜೆ, ನವಧಾನ್ಯ ಹಾಕುವುದು, ಜ.31 ರಂದು ದಶಮಿ ಹುಂಡಿಗಳ ಪೂಜೆ, ಉತ್ಸವಮೂರ್ತಿ ಪ್ರತಿಷ್ಠಾಪನೆ, ಫೆ.1 ರಂದು ಪಲ್ಲಕ್ಕಿ ಉತ್ಸವ ಹಾಗೂ ರಕ್ಷಾ ದೇವಿ ಸಣ್ಣ ರಥೋತ್ಸವ, ಫೆ.2 ರಂದು ವೀರಭದ್ರ ಸಣ್ಣ ರಥೋತ್ಸವ, ಫೆ.3 ರಂದು ಎಲ್ಲ ದೇವಾದಿಗಳ ಸಣ್ಣ ರಥೋತ್ಸವ, ಫೆ.4 ರಂದು ಚತುರ್ದಶಿ, ಫೆ.5 ರಂದು ಭಾರತ ಹುಣ್ಣಿಮೆ ಅಂಗವಾಗಿ ರಾತ್ರಿ 8 ಗಂಟೆಗೆ ಚನ್ನಬಸವೇಶ್ವರ ದೇವರ ರಥಾರೋಹಣ, ಫೆ. 6 ರಂದು ಮಹಾ ರಥೋತ್ಸವ, ಫೆ. 7 ರಂದು ಬಯಲು ಕುಸ್ತಿಗಳು, ಫೆ. 8 ರಂದು ಓಕಳಿ, ಸಣ್ಣ ರಥೋತ್ಸವವದೊಂದಿಗೆ ಜಾತ್ರಾ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದರು. ಎಂಎಲ್‌ಸಿ ಗಣಪತಿ ಉಳ್ವೇಕರ್, ಟ್ರಸ್ಟ್ ಕಮಿಟಿಯ ಶಿವಾನಂದ ಕಿತ್ತೂರು, ಉಳವಿ ಗ್ರಾಪಂನ ಮಂಜುನಾಥ ಮೊಕಾಶಿ ಸುದ್ದಿಗೋಷ್ಠಿಯಲ್ಲಿದ್ದರು.
30 ಕೋಟಿ ರೂ. ಮಾಸ್ಟರ್ ಪ್ಲಾನ್
ಚನ್ನಬಸವೇಶ್ವರ ದೇವಸ್ಥಾನ ನವೀಕರಣ, ಆಟಿಟೋರಿಯಂ ಹಾಗೂ ವಸತಿಗೃಹ ಸೇರಿ ಉಳವಿ ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿದೆ.ಒಟ್ಟು 30 ಕೋಟಿ ರೂ. ಯೋಜನೆ ಇದ್ದು, ಅನುದಾನ ಬಿಡುಗಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ. ಜಾತೋತ್ಸವದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಜಯ ಕಿತ್ತೂರು ಮಾಹಿತಿ ನೀಡಿದರು.