ಜಿಲ್ಲೆ

ಫೆ.28ಗಡುವೂಳಗೆ ನಾಮಫಲಕಗಳನ್ನು ಕನ್ನಡೀಕರಣಗೊಳಿಸದಿದ್ದರೆ ಉಗ್ರಹ ಹೋರಾಟ: ಟಿ.ಎ.ನಾರಾಯಣಗೌಡ ಎಚ್ಚರಿಕೆ

ಹಾಸನ: ಬೆಂಗಳೂರಿನಲ್ಲಿ ಫೆ.28ಗಡುವೂಳಗೆ ನಾಮಫಲಕಗಳನ್ನು ಕನ್ನಡೀಕರಣಗೊಳಿಸಲು ಸರ್ಕಾರ ಮುಂದಾಗದಿದ್ದಾರೆ ಇಡಿ ಪಂಪಚವೇ ತಿರುಗಿ ನೋಡುವ ರೀತಿ ಹೋರಾಟಕ್ಕೆ ಸಜ್ಜಾಗುವುದಾಗಿ ಸರ್ಕಾಕ್ಕೆ ಕನ್ನಡ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ನೂರಕ್ಕೆ ನೂರು ಅನುಷ್ಠಾನ ಆಗುವವರೆಗೂ ಕರವೇ ಹೋರಾಟ ಮುಂದುವರೆಯುತ್ತದೆ. ಈ ಹಿಂದೆ ನಡೆದ ಹೋರಾಟದಲ್ಲಿ ನನ್ನನ್ನು ಜೈಲಿಗೆ ಕಳುಹಿಸಬೇಕೆಂದು 16 ಪ್ರಕರಣ ದಾಖಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 16 ಅಲ್ಲ, ಇನ್ನೂ ನೂರು ಕೇಸ್ ಹಾಕಿಸಿದರೂ ನಾರಾಯಣಗೌಡರ ಧ್ವನಿ ಅಡಗಿಸಲು ಆಗುವುದಿಲ್ಲ. ಆ ಶಕ್ತಿ ನಿಮಗಿಲ್ಲ, ನಿಮ್ಮ ಸರ್ಕಾರಕ್ಕೂ ಇಲ್ಲ. ಇಲ್ಲಿ ಕನ್ನಡ ಗೆದ್ದಿದೆ, ಸಿದ್ದರಾಮಯ್ಯ ಅವರು ಸೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕನ್ನಡ ಕಡ್ಡಾಯಗೊಳಿಸುವ ಕಾನೂನಿಗೆ ರಾಜ್ಯಪಾಲರು ಅಂಕಿತ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಲ್ಲಿ ಯಾವುದೋ ಕಾಣದ ಕೈಗಳು, ಉತ್ತರ ಭಾರತದ ಬಂಡವಾಳಶಾಹಿಗಳು ಕೆಲಸ ಮಾಡುತ್ತಿರುವ ಅನುಮಾನ ಕಾಡುತ್ತಿದೆ. ರಾಜ್ಯಪಾಲರು ಕರ್ನಾಟಕದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಕರ್ನಾಟಕದವರ ಪರವಾಗಿ ಧ್ವನಿ ಎತ್ತಬೇಕಾದವರೂ ಸಹಿ ಹಾಕದೆ ವಾಪಾಸ್ ಕಳುಹಿಸಿದ್ದಾರೆ. ರಾಜ್ಯಪಾಲರು ಕೂಡಲೇ ಪುನಃ ಕಡತ ತರಿಸಿಕೊಂಡು ಸಹಿ ಮಾಡಬೇಕು. ಎರಡು ಸದನದಲ್ಲಿ ಅಂಗೀಕಾರ ಆದಮೇಲೆ ನೀವು ಸಹಿ ಮಾಡುವ ಅಗತ್ಯವಿಲ್ಲ, ಅದು ತಾನಾಗಿಯೇ ಆಗುತ್ತೆ. ರಾಜ್ಯಪಾಲರಾಗೆ ಈ ನಾಡಿನ ನೆಲದ, ಜಲದ, ಭಾಷೆ, ಇಲ್ಲಿಯ ಜನರ ಋಣ ತೀರಿಸಬೇಕಾದರೆ ಸಹಿ ಹಾಕಲಿ, ಇಲ್ಲದಿದ್ದರೆ ವಾಪಾಸ್ ಕೇಂದ್ರಕ್ಕೆ ಹೋಗಲಿ ಎಂದು ಹೇಳಿದರು.
ಸರ್ಕಾರದ ವಿರುದ್ಧ ಅಸಮಾಧಾನ:
ರಾಜ್ಯದ 224 ಕ್ಷೇತ್ರಗಳು ಕನ್ನಡಿಕರಣ ಆಗಬೇಕು ಎಂದು ಕರವೇ ನಿರ್ಣಯ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ದೊಡ್ಡ ಉದ್ಯಮ, ಕಟ್ಟಡಗಳು ತಲೆ ಎತ್ತಿವೆ. ಬೆಂಗಳೂರಿನಲ್ಲಿರುವ ಮಾಲ್ ಆಫ್ ಏಷ್ಯಾದಲ್ಲಿ ಕನ್ನಡ ನಾಮಫಲಕ ಹಾಕಿ ಎಂದಿದ್ದಕ್ಕೆ ಅವರು ನನ್ನ ಮೇಲೆ ಕೋರ್ಟ್ಗೆ ಹೋದರು. ನಾನು ಅಲ್ಲಿ ಪ್ರತಿಜ್ಞೆ ಮಾಡಿದೆ, ಇಡೀ ಬೆಂಗಳೂರು ಗುರಿಯಾಗಿಟ್ಟುಕೊಂಡು ಶೇ.60 ರಷ್ಟು ಕನ್ನಡ ನಾಮಫಲಕ ಹಾಕಬೇಕು ಎನ್ನುವ ಹೋರಾಟಕ್ಕೆ ಕೈಹಾಕಿದೆ. ಡಿ.27ರಂದು ಇಲ್ಲಿಗೆ ಬಂದಿರುವ ಉತ್ತರ ಭಾರತದ ಉದ್ಯಮಿಗಳ ಕಣ್ಣು, ಕಿವಿ ತೆರೆಸುವ ಹೋರಾಟ ನಡೆಯಿತು. ಅವರು ಸರ್ಕಾರಗಳಿಗೆ ಒತ್ತಡ ಹಾಕಿ, ಕಪ್ಪಕಾಣಿಕೆ ಸಲ್ಲಿಸಿದ್ದರಿಂದ ನಾನು 14 ದಿನ ಜೈಲಿಗೆ ಹೋಗುವ ಹುನ್ನಾರ ಮಾಡಲಾಯಿತು ಎಂದು ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನನ್ನ ಧ್ವನಿಯನ್ನು ಅಡಗಿಸುವ ಕೆಲಸ ಮಾಡಿದರೆ ಅದು ಮೂರ್ಖರ ಪರಮಾವಧಿಯಾಗಲಿದೆ. ನನ್ನ ಧ್ವನಿಯನ್ನು ಯಾರು ಅಡಗಿಸಲು ಸಾಧ್ಯವಿಲ್ಲ. ನಾನು ಹೊಯ್ಸಳ ನಾಡು ಹಾಸನದಿಂದ ಬಂದಿರುವವನು. ನನ್ನ ರಕ್ತದ ಕಣಕಣದಲ್ಲೂ ಕನ್ನಡ ಗಟ್ಟಿಯಾಗಿ ಉಳಿದಿದೆ ಎಂದರು.
ಟಿ.ಎ.ನಾರಾಯಣಗೌಡ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಇದೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ವೇಳೆ ಅವರನ್ನು ಕಾರ್ಯಕರ್ತರು ಬೂವನಹಳ್ಳಿ ಬೈಪಾಸ್‌ನಿಂದ ನೂರಾರು ಕರವೇ ಕಾರ್ಯಕರ್ತರು ಅವರನ್ನು ಪುಪ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು.
ಇದೆ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ. ಮದನ್‌ಗೌಡ,ಮೆರವಣಿಗೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸಿ.ಡಿ. ಮನುಕುಮಾರ್, ಉಪಾಧ್ಯಕ್ಷ ಸೀತರಾಮು, ಕಾರ್ಮಿಕ ಘಟಕದ ಬೋರೇಗೌಡ,ಯುವ ಘಟಕದ ಅಧ್ಯಕ್ಷ ಪ್ರೀತಮ್ ರಾಜ್, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಆಲೂರು ತಾಲೂಕು ಅಧ್ಯಕ್ಷ ನಟರಾಜ್, ತನುಗೌಡ, ರೇಖಾ ಮಂಜುನಾಥ್ ಇತರರು ಉಪಸ್ಥಿತರಿದ್ದರು.