ರಾಯಚೂರು : ಬಾಕಿಯಿರುವ 20 ತಿಂಗಳ ಸಂಬಳ ಪಾವತಿಸುವಂತೆ ಒತ್ತಾಯಿಸಿ ನೀರಾವರಿ ಇಲಾಖೆ ಮುನಿರಾಬಾದ್ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಫೆ.26ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, 20 ತಿಂಗಳಿಂದ ಸಂಬಳವಿಲ್ಲದೆ 1,350 ಕಾರ್ಮಿಕರು ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ. ಮುಷ್ಕರದಿಂದ ನೀರು ನಿರ್ವಹಣೆಗೆ ಉಂಟಾಗುವ ಸಮಸ್ಯೆಗೆ ಸರ್ಕಾರವೇ ಹೊಣೆಯಾಗಲಿದೆ ಎಂದರು.
2018ರ ಸೆಪ್ಟೆಂಬರ್‌ನಲ್ಲಿ ಜಲ ಸಂಪನ್ಮೂಲ ಖಾತೆ ಸಚಿವರು ನೀಡಿದ ಭರವಸೆ ಈಡೇರಿಲ್ಲ. ಸಂಬಳ ಪಾವತಿಗೆ ಇಲಾಖೆ ಉನ್ನತಾಧಿಕಾರಿಗಳನ್ನು ಹಲವಾರು ಬಾರಿ ಭೇಟಿ ಮಾಡಲಾಗಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಮುಷ್ಕರದ ನೋಟಿಸ್ ಜಾರಿ ಮಾಡಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಶಿವಮೊಗ್ಗ ಮೂಲದ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದ್ದು, ಕಾರ್ಮಿಕರ ಸಾಮಾಜಿಕ ವಿಮೆ, ಭವಿಷ್ಯ ನಿಧಿ ಹಣ ಕಡಿತ ಮಾಡುತ್ತಿದ್ದರೂ ಈವರೆಗೂ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ದೊರಕಿಲ್ಲ. ಕಾರ್ಮಿಕರಿಗೆ ನೇಮಕ ಪತ್ರ, ಗುರುತಿನ ಚೀಟಿ, ಸಮವಸ್ತ್ರ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದನೆ ದೊರೆಯುತ್ತಿಲ್ಲ.
ಕಾರ್ಮಿಕರು ಮುಷ್ಕರ ನಡೆಸುವುದರಿಂದ ನೀರು ನಿರ್ವಹಣೆ ಸಮಸ್ಯೆ ಎದುರಾಗಿ ರೈತರಿಗೆ ಸಮಸ್ಯೆಯಾಗಲಿದೆ. ರೈತರು ಕಾರ್ಮಿಕರ ಎದುರಿಸುತ್ತಿರುವ ಸಮಸ್ಯೆ ಅರ್ಥ ಮಾಡಿಕೊಂಡು ಹೋರಾಟಕ್ಕೆ ಬೆಂಬಲಿಸಬೇಕು. ಜನಪ್ರತಿನಿಧಿಗಳು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಆರ್.ಮಾನಸಯ್ಯ ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಜಿ.ಅಮರೇಶ, ಜಿ.ಅಡವಿರಾವ್, ಬಸವರಾಜ ಮರಕಂದಿನ್ನಿ, ಖಾಜಾಸಾಬ್, ಹನುಮಂತಪ್ಪ, ಈರಣ್ಣ, ಅಮರೇಗೌಡ ಉಪಸ್ಥಿತರಿದ್ದರು.