ಹಾಸನ: ದೇವಸ್ಥಾನಗಳ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ಆಕ್ರಮಣಗಳನ್ನು ವಿರೋಧಿಸಿ ಹಾಗೂ ವಸ್ತ್ರಸಂಹಿತೆ ಅಳವಡಿಸಲು ಆಗ್ರಹಿಸಿ ಫೆ. 20ರಂದು ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಸಭೆಯನ್ನು ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಚಂದ್ರ ಮೊಗವೀರ ತಿಳಿಸಿದರು.
ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಮೇಲೆ ಅನಧಿಕೃತ ಆಕ್ರಮಗಳು ನಡೆಯುತ್ತಿದ್ದು, ಉದಾಹರಣೆಗೆ ದೇವಸ್ಥಾನಗಳ ಸರ್ಕಾರಿಕರಣ, ದೇವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತವೆಂದು ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳ ಲೂಟಿ, ದೇವನಿಧಿ ಅಪವ್ಯಯ. ಹೀಗೆ ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿದೆ. ಅದಕ್ಕಾಗಿ ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ಇದೇ ಫೆ.20ರಂದು ನಗರದ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಸಭೆ ಆಯೋಜಿಸಲಾಗಿದೆ ಎಂದರು.
ದೇವಸ್ಥಾನದ ಮಹಾಸಂಘದ ವತಿಯಿಂದ ಕಳೆದ ಡಿ. 16 ಮತ್ತು 17ರಂದು ರಾಜ್ಯಮಟ್ಟದ ಉಪನಿಷತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಎಲ್ಲಾ ಅರ್ಚಕರು ಪುರೋಹಿತರು ಟ್ರಸ್ಟಿಗಳು ಮತ್ತು ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುವ ಎಲ್ಲರನ್ನೂ ಸಂಘಟಿಸುವ ದೃಷ್ಟಿಯಿಂದ ಆ ಕಾರ್ಯಕ್ರಮವನ್ನು ಮಾಡಲಾಯಿತು.ಅಲ್ಲಿ ಸುಮಾರು 850 ಟ್ರಸ್ಟಿಗಳು ಉಪಸ್ಥಿತರಿದ್ದರು ಎಮದು ಮಾಹಿತಿ ನೀಡಿದರು.
ಸಂಘಟನೆ ಕೇವಲ ರಾಜ್ಯಮಟ್ಟದಲ್ಲಿ ಆದರೆ ಸಾಲುವುದಿಲ್ಲ. ಎಲ್ಲಾ ಜಿಲ್ಲಾ ಮಟ್ಟದಲ್ಲಿಯೂ ಇಂತಹ ಸಂಘಟನೆ ಆಗಬೇಕು ಎಂದು ವ್ಯಕ್ತಪಡಿಸಿ ರಾಜ್ಯದ ಸುಮಾರು 16 ಜಿಲ್ಲೆಗಳಲ್ಲಿ ಈ ಅಧಿವೇಶನ ನಡೆಸಬೇಕು ಎಂದು ನಿರ್ಣಯಕ್ಕೆ ಬಂದರು. ಆದ್ದರಿಂದ 16 ಜಿಲ್ಲೆಗಳಲ್ಲಿ ಈ ಅಧಿವೇಶನದ ಆಯೋಜನೆ ಮಾಡಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಹುಬ್ಬಳ್ಳಿ, ಕೊಡಗು ಜಿಲ್ಲೆ, ಮತ್ತು ಹಾಸನ ಜಿಲ್ಲೆ ಸೇರಿದಂತೆ 16 ಕಡೆ ಈ ಅಧಿವೇಶನದ ಆಯೋಜನೆ ಮಾಡಲಾಗಿದ್ದು, ಹಾಸನದಲ್ಲಿ ಇದೇ ತಿಂಗಳ 20ನೇ ತಾರೀಕು ಜಿಲ್ಲಾ ಮಟ್ಟದ ಅಧಿವೇಶನವನ್ನು ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 9:00 ರಿಂದ ಸಂಜೆ 4 ಗಂಟೆಯವರೆಗೆ ಒಂದು ದಿನದ ಅಧಿವೇಶನವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಅಧಿವೇಶನದಲ್ಲಿ ದೇವಸ್ಥಾನದ ಕುರಿತಾಗಿ ಕಾನೂನಾತ್ಮಕ ಮಾರ್ಗದರ್ಶನವನ್ನು ಕೂಡ ನೀಡಲಿದ್ದೇವೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಟ್ರಸ್ಟಿಗಳು ಪುರೋಹಿತರು ಅರ್ಚಕರು ಸೇರಿದಂತೆ ಸುಮಾರು 200 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದರು.
ಈ ವೇಳೆ ಗಣಪತಿ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಆಚಾರ್, ನಗರದ ಸುಬ್ರಮಣ್ಯಸ್ವಾಮಿ ದೇವಾಲಯದ ಧರ್ಮದರ್ಶಿ ಗೋವಿಂದರಾಜು, ಕಾಳಿಕಾಂಬ ದೇವಸ್ಥಾನದ ಟ್ರಸ್ಟಿ ನಾಗೇಶ್ ಆಚಾರ್ ಮುಂತಾದವರು ಉಪಸ್ಥಿತರಿದ್ದರು.