ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ರಾಮೇಶ್ವರ, ಶ್ರೀ ಆಂಜನೇಯಸ್ವಾಮಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದ ಧಾರ್ಮಿಕ ಕೈಂಕರ್ಯಗಳು ಜ.30ರಿಂದ ಪ್ರಾರಂಭವಾಗಲಿದೆ.
ಫೆ.1ರಂದು ಆದಿಚುಂಚಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉದ್ಘಾಟನೆ ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.30ರಂದು ಬೆಳಗ್ಗೆ 9.30ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಗಂಗಾಪೂಜಾ, ಗೋಪೂಜಾ, ಯಾಗ, ಗಣಪತಿ ಪೂಜೆ, ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಮಂಟಪ ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮಗಳು ಜರುಗಲಿವೆ. ಜ.31 ರಂದು ಮೀನ ಲಗ್ನದಲ್ಲಿ ಕಳಸ ಸ್ಥಾಪನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಫೆ.1ರಂದು ಬ್ರಾಹ್ಮಿ ಮುಹೂರ್ತದಲ್ಲಿ ಕಳಸ, ರಾಜಗೋಪುರ ಮತ್ತು ವಿಮಾನ ಗೋಪುರಗಳ ಪ್ರಾಣಪ್ರತಿಷ್ಠಾಪನೆ ಜರುಗಲಿದೆ. ಬೆಳಗ್ಗೆ ಶುಭ ಮೀನ ಲಗ್ನದಲ್ಲಿ ಮಹಾಪೂಜಾ, ಪಂಚಾಮೃತ, ಅಭಿಷೇಕ, ಮಂಗಳದ್ರವ್ಯದೊಡನೆ, ಪೂರ್ಣ ಕುಂಭಾಭಿಷೇಕ ನೆರವೇರಲಿದೆ ಎಂದು ತಿಳಿಸಿದರು.
ಗ್ರಾಮದ ಯಜಮಾನರಾದ ತಮ್ಮೇಗೌಡ ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳಾದ ಅಂಕೇಗೌಡನಕೊಪ್ಪಲು, ಕಣಿವೆಕೊಪ್ಪಲು, ಹೊನಗಾನಹಳ್ಳಿ, ಕೆ.ಮಲ್ಲೇನಹಳ್ಳಿ, ಚಿಕ್ಕಬೋಹನಗಳ್ಳಿ, ಲಿಂಗಾಪುರ ಸೇರಿದಂತೆ ಎಲ್ಲ ಗ್ರಾಮಗಳ ಸಹಕಾರದಿಂದ ಗ್ರಾಮದ ರಾಮೇಶ್ವರ, ಆಂಜನೇಯಸ್ವಾಮಿ, ಪಟ್ಟಲದಮ್ಮ, ದಂಡಮ್ಮ ದೇವಸ್ಥಾನಗಳ ಜೋರ್ಣೋದ್ಧಾರವಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಅವರ ಕಾಳಜಿ ಮತ್ತು ಸಹಕಾರದಿಂದ ಎಲ್ಲ ಕೆಲಸಗಳು ಮುಗಿದಿವೆ. ದೇವಸ್ಥಾನದ ಸುತ್ತಲೂ ನಿರ್ಮಾಣವಾಗಿರುವ ನಾಲ್ಕು ಉದ್ಯಾನಗಳಿಗೆ ಬಾಲಗಂಗಾಧರನಾಥ ಸ್ವಾಮೀಜಿ, ಕುವೆಂಪು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಇಡಲಾಗುತ್ತದೆ ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನ ಫೆ.1ರಂದು ಕುಂಭ ಕಳಸದ ಮೆರವಣಿಗೆ ಮತ್ತು ಜಾನಪದ ಕಲಾತಂಡಗಳೊಂದಿಗೆ ಗಣ್ಯರನ್ನು ವೇದಿಕೆಗೆ ಕರೆತರಲಾಗುವುದು ಮತ್ತು 20 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ತಾಪಂ ಮಾಜಿ ಸದಸ್ಯ ಗೋಪಾಲೇಗೌಡ, ಮೈಕ್ ಮಹದೇವು, ಸಿ.ಎ.ಲೋಕೇಶ್, ಯಜಮಾನರಾದ ಸುಬ್ಬೇಗೌಡ, ನಾಗೇಗೌಡ, ಗಿರೀಗೌಡ, ದೊಡ್ಡಣ್ಣ, ರಾಜೇಗೌಡ, ಲಕ್ಷ್ಮೇಗೌಡ, ಯೋಗಣ್ಣ, ಅಂದಾನಿಗೌಡ, ಸಣ್ಣೇಗೌಡ, ಸಿ.ಪ್ರಕಾಶ್, ಸ್ವಾಮೀಗೌಡ, ನಾರಾಯಣಗೌಡ, ಪುಟ್ಟರಾಜು ಇತರರು ಇದ್ದರು.