ಜಿಲ್ಲೆ

ಫೆ.1ಕ್ಕೆ ಹಡಪದ ಅಪ್ಪಣ್ಣ  ಸಮಾಜದ ಜನಜಾಗೃತಿ ಕಾರ್ಯಕ್ರಮ

ದಾವಣಗೆರೆ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನದ ಉದ್ಘಾಟನೆ, ರಾಜ್ಯ ಸರ್ಕಾರದ 3 ಕೋಟಿ ರೂ. ಅನುದಾನದಲ್ಲಿ ಶಿಕ್ಷಣ ಇತರೆ ಉದ್ದೇಶಿತ ಕಟ್ಟಡಗಳ ಅಡಿಗಲ್ಲು ಕಾರ್ಯಕ್ರಮ ಫೆ.1ರಂದು ನಡೆಯಲಿದೆ.

ಇದರ ಜತೆಯಲ್ಲೇ ಹಡಪದ ಅಪ್ಪಣ್ಣ ಸಮಾಜದ ರಾಜ್ಯಮಟ್ಟದ ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ,ಆಂಧ್ರಪ್ರದೇಶ, ಮಹಾರಾಷ್ಟ್ರ , ಗೋವಾ ಹಾಗೂ ಕರ್ನಾಟಕದಲ್ಲಿನ ಸಮಾಜದ 1.5 ಲಕ್ಷ ಜನರನ್ನು ಸೇರಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಹಾಗೂ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸಿದ್ದಪ್ಪ ಮ. ಹಡಪದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ದೇಶಿತ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ, ಶ್ರೀರಾಮುಲು, ಕೋಟಾ ಶ್ರೀನಿವಾಸ ಪೂಜಾರಿ ಇತರರು ಪಾಲ್ಗೊಳ್ಳುವರು ಎಂದರು.

ಸುಮಾರು 13 ಲಕ್ಷ ಜನಸಂಖ್ಯೆ ಹೊಂದಿರುವ ಹಡಪದ ಅಪ್ಪಣ್ಣ ಸಮಾಜ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ರಂಗಗಳಲ್ಲಿ ಹಿಂದಿದೆ. ಸಮಾಜದ ಯಾವೊಬ್ಬರೂ ಜನಪ್ರತಿನಿಧಿಗಳೂ ಇಲ್ಲ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮ್ಮ ಸಮಾಜದವರು ಬರೆಸಿದ್ದರಿಂದ ಅನೇಕ ಸವಲತ್ತುಗಳಿಂದ ಸಮಾಜ ವಂಚಿತವಾಗಿದೆ.

ಸರ್ಕಾರ ನಮ್ಮ ಸಮಾಜವನ್ನು ಎಸ್ಸಿ ವ್ಯಾಪ್ತಿಗೆ ಸೇರ್ಪಡೆ ಮಾಲು ಶಿಫಾರಸು ಮಾಡುವಂತೆ ಕಾರ್ಯಕ್ರಮದಲ್ಲಿ ಸರ್ಕಾರವನ್ನು ಆಗ್ರಹಿಸಲಾಗುವುದು. ಇತರೆ ಸಮಾಜಗಳಂತೆ ನಮಗೂ ಹಡಪದ ಅಪ್ಪಣ್ಣ ಪ್ರತ್ಯೇಕ ನಿಗಮ ಮಂಡಳಿ ರಚಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಹಾಗೂ ಅವರ ಉದ್ಯೋಗಕ್ಕೆ ನೆರವಾಗಬೇಕು ಎಂದು ಆಗ್ರಹಿಸಿ ಈ ಶಕ್ತಿ ಪ್ರದರ್ಶನ ನಡೆಸಲಾಗುತ್ತಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಸಂತೋಷ್ ಹಡಪದ, ಜಿಲ್ಲಾಧ್ಯಕ್ಷ ಶಶಿಧರ ಬಸಾಪುರ, ಎನ್.ಜೆ.ಶಿವಕುಮಾರ್, ಜಿಗಳಿ ಸ್ವಾಮಿ ಲಿಂಗಪ್ಪ, ಎಚ್.ಟಿ.ವಿಜಯಕುಮಾರ್, ಅಜ್ಜಪ್ಪ ಕೊಮಾರನಹಳ್ಳಿ, ಬಸವರಾಜ್ ಮಲೇಬೆನ್ನೂರು, ನಾಗರಾಜ ಮೈಲಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.