ಚಾಮರಾಜನಗರ: ಈ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ಧಿ ಅಂಗವಾಗಿ ವರ್ಷವಿಡೀ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಟಲ್ ಜೀ ಜನ್ಮಶತಮಾನೋತ್ಸವ ಸಮಿತಿ ರಾಜ್ಯ ಸಹ ಸಂಚಾಲಕ ಎಂಎನ್.ಫಣೀಶ್ ಹೇಳಿದರು.
ಈ ದೇಶ ಕಂಡಂತಹ ಅಜಾತಶತ್ರು, ಅಭಿವೃದ್ಧಿಯ ಹರಿಕಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಬಿಜೆಪಿ ಸಿದ್ಧತೆಯನ್ನು ಮಾಡಿಕೊಂಡಿದೆ. ಕಳೆದ ಡಿ.25 ರಿಂದಲೇ ಕೇಂದ್ರ ಮತ್ತು ರಾಜ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅದರಂತೆ ಜ.14 ರಿಂದ ಫೆ.14 ರವರೆಗೆ ಅಟಲ್ ಸ್ಮೃತಿ ಸಂಕಲನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಟಲ್ ಸ್ಮೃತಿ ಸಂಕಲನ ಅಭಿಯಾನದ ಅಂಗವಾಗಿ ಈಗಾಗಲೇ ಜಿಲ್ಲಾಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಅಭಿಯಾನದಲ್ಲಿ ಅಟಲ್ ಜೀ ಅವರು ಜಿಲ್ಲೆ ಮತ್ತು ತಾಲೂಕಿಗೆ ಭೇಟಿ ನೀಡಿದ ಸಂದರ್ಭದ ಛಾಯಾಚಿತ್ರಗಳನ್ನು, ಅವರಿಗೆ ಸಂಬಂಧಿಸಿದ ಲೇಖನಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅವರ ಜತೆಗೆ ಯಾರು ಒಡನಾಟವನ್ನು ಹೊಂದಿದ್ದರು ಅವರ ಕುರಿತು ಮಾಹಿತಿ ಕಲೆಹಾಕಿ, ಅವರ ಆದರ್ಶಗಳನ್ನು ಒಳಗೊಂಡ ಸ್ಮೃತಿ ಸಂಕಲನ ಮಾಡಿ ಕೃತಿಯಾಗಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಅದಲ್ಲದೇ ಫೆ.15 ರಿಂದ ಒಂದು ತಿಂಗಳ ಕಾಲ ಅಟಲ್ ವಿರಾಸತ್ ಸಮಾವೇಶವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜನೆ ಮಾಡುತ್ತಿದ್ದೇವೆ. ಈ ಸಮಾವೇಶದಲ್ಲಿ ಅಟಲ್ ಜೀ ಅವರೊಂದಿಗೆ ನಿರಂತರ ಸಂಪರ್ಕವನ್ನು ಒಳಗೊಂಡಿದ್ದ ವ್ಯಕ್ತಿಗಳನ್ನು ಸನ್ಮಾನಿಸಲಾಗುತ್ತದೆ. ಅದಲ್ಲದೇ ವರ್ಷವಿಡೀ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿರುವ ಜನರು ತಮ್ಮ ಬಳಿ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತಾದ ವಿಚಾರ, ಛಾಯಾಚಿತ್ರಗಳು ಇದ್ದರೇ ಮಾಹಿತಿ ನೀಡಬೇಕು. ನಾವೇ ಅವರು ಇರುವಲ್ಲಿಗೆ ಬಂದು ಅದನ್ನು ಸಂಗ್ರಹ ಮಾಡುತ್ತೇವೆ. ಜಿಲ್ಲಾ ಸಮಿತಿಯ ಸಂಚಾಲಕರಾಗಿ ನಾರಾಯಣಪ್ರಸಾದ್, ಸಹ ಸಂಚಾಲಕರಾಗಿ ಹೊನ್ನೂರು ಮಹದೇವಸ್ವಾಮಿ, ಕಾಡಹಳ್ಳಿ ಕುಮಾರ್, ಯು.ಎನ್.ಪದ್ಮಾ ಹಾಗೂ ದೇಪಾಪುರ ಮಹದೇವಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್ ಹಾಜರಿದ್ದರು.