ಜಿಲ್ಲೆ

ಫೆ. 13ರಿಂದ ಆಶಾ ಕಾರ್ಯಕರ್ತೆಯರಿಂದ ವಿಧಾನಸೌಧ ಚಲೋ

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 13 ಹಾಗು 14 ರಂದು ಆಶಾ ಕಾರ್ಯಕರ್ತೆಯರಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡ ಜಿ. ಹನುಮೇಶ ತಿಳಿಸಿದರು.
ಆರೋಗ್ಯ ಇಲಾಖೆಗೆ ಆಶಾ ಕಾರ್ಯಕರ್ತೆಯರ ಅವಶ್ಯಕತೆ ಹೆಚ್ಚಿದೆ. ಆದರೆ ಇದುವರೆಗೆ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಕಾರ್ಮಿಕರು ಅಂತ ಪರಿಗಣಿಸಿಲ್ಲ. ಆಶಾ ಕಾರ್ಯಕರ್ತೆಯರು ಹಾಕುತ್ತಿರುವ ಶ್ರಮಕ್ಕೆ ಪ್ರತಿಫಲ ದೊರೆಯುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ಆರೋಗ್ಯ ಇಲಾಖೆಯು 8 ವರ್ಷಗಳಿಂದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹ ಧನ ನೀಡಲು ಆರ್‌ಸಿಹೆಚ್ ಪೋರ್ಟ್ಲ್‌ಗೆ ಲಿಂಕ್ ಮಾಡಿದೆ. ಆಗಿನಿಂದಲೂ ಸಂಪೂರ್ಣ ವೇತನ ಕಾರ್ಯಕರ್ತೆಯರಿಗೆ ತಲುಪುತ್ತಿಲ್ಲ. ಕೇಂದ್ರದಿಂದ ಮಾಸಿಕ ಏಳು ಸಾವಿರ ಹಣ ಬರುತ್ತದೆ. ಆದರೆ ಪೋರ್ಟ್ಲ್ ಕಾರಣಕ್ಕೆ ಸೋರಿಕೆಯಾಗಿ ಎರಡರಿಂದ ಮೂರು ಸಾವಿರ ರೂ. ಮಾತ್ರ ಬರುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 42 ಆಶಾ ಕಾರ್ಯಕರ್ತೆಯರಿದ್ದು, ಜಿಲ್ಲೆಯಲ್ಲಿ 1500 ನೌಕರರು ಇದ್ದಾರೆ. ಎಲ್ಲಾ ಕಾರ್ಯಕರ್ತೆಯರಿಗೂ ಈ ಅನ್ಯಾಯವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟಿಗೆ 15 ಸಾವಿರ ರೂ. ವೇತನ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಹುತೇಕ ಆಶಾ ಕಾರ್ಯಕರ್ತೆಯರಿಗೆ ಆಂಡ್ರಾಯ್ಡಾ ಮೊಬೈಲ್ ಬಳಕೆ ಗೊತ್ತಿಲ್ಲ. ಆದರೆ ಮೊಬೈಲ್ ಆಧಾರಿತ ಕೆಲಸಗಳನ್ನೇ ನೀಡುತ್ತಿರುವುದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಮೊಬೈಲ್ ಆಧಾರಿತ ಕೆಲಸ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಸಚಿವರ ಜೊತೆ ಸಾಕಷ್ಟು ಸಲ ಚರ್ಚೆ ನಡೆಸಿದರು ಪ್ರಯೋಜನವಾಗಿಲ್ಲ. ಹೀಗಾಗಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಶಾ ಕಾರ್ಯಕರ್ತೆಯರಾದ ತಾಯಿರಾ ಬಾನು, ಗೀತಾ, ಶಿವಮ್ಮ, ಮಮತಾ, ಪಾರ್ವತಮ್ಮ, ನೇತ್ರಾ, ತಾರಾಮಣಿ ಇತರರಿದ್ದರು.