ಯಳಂದೂರು: ಯಳಂದೂರಿನಲ್ಲಿ ಫೆ. 13ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಶಾಸಕ ಎನ್.ಮಹೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಸಕ ಎನ್.ಮಹೇಶ್ ಮಾತನಾಡಿ, ಒಂದು ದಿನದ ಈ ಸಮ್ಮೇಳನವನ್ನು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಸಲಾಗುವುದು. ಅಂದು ಬೆಳಗ್ಗೆ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಪಟ್ಟಣದ ಷಡಕ್ಷರ ದೇವರ ಗದ್ದುಗೆಯಿಂದ ವಿವಿಧ ಕಲಾತಂಡಗಳೊಡನೆ ವೇದಿಕೆ ಕರೆತರಲಾಗುವುದು. ರಾಷ್ಟ್ರ, ನಾಡಿನ ಮತ್ತು ಪರಿಷತ್ತಿನ ಧ್ವಜಾರೋಹಣ, ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ, ಮಧ್ಯಾಹ್ನ ಕವಿಗೋಷ್ಠಿ, ಸಮಾರೋಪ ಸಮಾರಂಭ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದಕ್ಕೆ ತಹಸೀಲ್ದಾರ್, ಇಒ, ಮುಖ್ಯಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಸಹಕರಿಸಬೇಕು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಮಾತನಾಡಿ, ಮೈಸೂರು ಜಿಲ್ಲೆಯಾಗಿದ್ದಾಗಲೇ ಯಳಂದೂರಿನಲ್ಲಿ ತಾಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆ ನಂತರ 5 ತಾಲೂಕು ಸಮ್ಮೇಳನಗಳು 2 ಜಿಲ್ಲಾ ಸಮ್ಮೇಳನಗಳು ನಡೆದಿವೆ. ಇದು 7ನೇ ತಾಲೂಕು ಸಮ್ಮೇಳನವಾಗಿದೆ. ಇದರ ರೂಪುರೇಷೆ ಬಗ್ಗೆ ಶಾಸಕರು, ಅಧಿಕಾರಿ ವರ್ಗ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜತೆ ಚರ್ಚಿಸಿ ಅರ್ಥಪೂರ್ಣವಾಗಿ ನಡೆಸಬೇಕು ಎಂದು ಮನವಿ ಮಾಡಿದರು.
ಗಣರಾಜ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ: ಇದಕ್ಕೂ ಮುನ್ನ ಇದೇ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಶಾಸಕರು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲೇ ಧ್ವಜಾರೋಹಣ, ಪೊಲೀಸ್ ಶಾಲಾ ಮಕ್ಕಳ ಪರೇಡ್ ಹಾಗೂ ವೇದಿಕೆ ಕಾರ್ಯಕ್ರಮ ನಡೆಸಲು ಸೂಚನೆ ನೀಡಿದರು.
ಜ.25 ಕ್ಕೆ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಇದ್ದು, ಜ.24ರಿಂದ 26 ರವರೆಗೆ ಪಟ್ಟಣದ ಬಳೇಮಂಟಪ, ದಿವಾನ್‌ಪೂರ್ಣಯ್ಯ ವಸ್ತು ಸಂಗ್ರಹಾಲಯ, ಭೂಲಕ್ಷ್ಮೀ ವರಾಹಸ್ವಾಮಿ ದೇಗುಲ, ಅಂಬೇಡ್ಕರ್ ಸಮುದಾಯ ಭನವ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್ ಮಾತನಾಡಿದರು. ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ, ತಹಸೀಲ್ದಾರ್ ಶಿವರಾಜು, ಇಒ ಉಮೇಶ್, ಬಿಇಒ ಕೆ ಕಾಂತರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.