ಬೆಳಗಾವಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಳಗಾವಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನಗರದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆಗಳಲ್ಲಿನ ಫುಟ್‌ಪಾತ್ ಆಕ್ರಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳು ರಸ್ತೆಗಿಳಿಯುತ್ತಿದ್ದು, ಸಂಚಾರ ದಟ್ಟಣೆ ಮತ್ತಷ್ಟು ತಲೆನೋವಾಗಿದೆ.
ಪಾಲಿಕೆ ವ್ಯಾಪ್ತಿಯ ಖಡೇಬಜಾರ್, ಶಹಾಪುರ, ಮಾರುತಿಗಲ್ಲಿ, ಚವ್ವಾಟ್‌ಗಲ್ಲಿ ಹಾಗೂ ದಂಡುಮಂಡಳಿ ವ್ಯಾಪ್ತಿಯ ಆರ್‌ಟಿಒ ಕಚೇರಿ ಪಕ್ಕದ ವಾಣಿಜ್ಯ ಮಳಿಗೆಗಳ ಆವರಣ ಮತ್ತು ಹಳೇ ಪಿ.ಬಿ.ರಸ್ತೆಯ ಎರಡೂ ಬದಿಗಳಲ್ಲಿ ನಿರ್ಮಾಣ ಮಾಡಿರುವ ಪಾದಚಾರಿ (ಫುಟ್‌ಪಾತ್) ಮಾರ್ಗವನ್ನುಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿರುವುದು ಸಂಚಾರಕ್ಕೆ ಸಮಸ್ಯೆಯಾಗಿದೆ.
ಸಂಚಾರಕ್ಕೆ ತೊಂದರೆ: ಕಿರಾಣಿ ಅಂಗಡಿಗಳ ಮುಂದೆ ದಿನಸಿ ಸಾಮಗ್ರಿ, ಬಟ್ಟೆ ಅಂಗಡಿಗಳ ಮುಂದೆ ಬೊಂಬೆಗಳು, ಚಿಕನ್ ಸ್ಟಾಲ್‌ಗಳ ಮುಂದೆ ಬೋನ್‌ಗಳು, ಪಂಚರ್ ಶಾಪ್, ಬೀಡಾ ಅಂಗಡಿ, ಇಲೆಕ್ಟ್ರಿಕ್ ಮತ್ತು ಹಾರ್ಡ್‌ವೇರ್ ಅಂಗಡಿಗಳ ಮುಂದೆ ಕೃಷಿ ಸಲಕರಣೆಗಳು, ನಾಮಫಲಕ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಪಾದಚಾರಿಗೆ ಸಂಚಾರಕ್ಕೆ ಸಮಸ್ಯೆಯಾಗಿದೆ.
ಕಾರ್ಯನಿರ್ವಹಿಸದ ಕ್ಯಾಮರಾ: ನಗರದ ಪ್ರಮುಖ ವೃತ್ತಗಳಲ್ಲಿ ಅಪಘಾತ ತಡೆಯಲು ಹಾಗೂ ಅಪರಾಧ ಚಟುವಟಿಕೆ ನಿಯಂತ್ರಿಸಲು ಅಳವಡಿಸಿರುವ ಸಿಸಿ ಕ್ಯಾಮರಾಗಳು ಸದ್ಯ ಕಾರ್ಯನಿರ್ವಹಿಸುತ್ತಿಲ್ಲ. ಇದು ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತಿದೆ.
ಮಾರುಕಟ್ಟೆ ಪ್ರದೇಶದಲ್ಲಿ ದಿನಕ್ಕೊಂದು ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಹುತೇಕ ಅಲ್ಲಿನ ಅಂಗಡಿಗಳ ಮಾಲೀಕರ ವಾಹನಗಳಿಂದ ತುಂಬುವುದರಿಂದ ಖರೀದಿಗೆ ಬರುವ ಜನರ ವಾಹನ ನಿಲುಗಡೆಗೆ ಅವಕಾಶ ಸಿಗುತ್ತಿಲ್ಲ. ಸಂಜೆ ಸಮಯದಲ್ಲಿ ಪಾದಚಾರಿ ಮಾರ್ಗದಲ್ಲಿಯೇ ಮತ್ತಷ್ಟು ಚಾಟ್ಸ್ ಮತ್ತು ಫಾಸ್ಟ್‌ಫುಡ್ ಅಂಗಡಿಗಳು ತಲೆ ಎತ್ತುವ ಮೂಲಕ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚಾರಮಾಡಿ ಅಪಘಾತಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ನಿತ್ಯ ನಾಗರಿಕರು ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದನ್ನೆಲ್ಲ ನೋಡಿಯೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪಾದಚಾರಿಗಳ ಸಂಚಾರಕ್ಕೆ ಅವಕಾಶ ನೀಡದಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಸಂಬಂಧಿತ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಿ, ಫುಟ್‌ಪಾತ್ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು.| ರುದ್ರೇಶ ಘಾಳಿ ಆಯುಕ್ತರು, ಮಹಾನಗರ ಪಾಲಿಕೆ ಬೆಳಗಾವಿ