ಜಿಲ್ಲೆ

ಫುಟ್​ಪಾತ್ ಅತಿಕ್ರಮಣ ತೆರವು

ಹುಬ್ಬಳ್ಳಿ: ನಗರದ ಶಿರೂರ ಪಾರ್ಕ್ ಬಳಿಯ ಸಿದ್ದೇಶ್ವರ ಪಾರ್ಕ್​ನಲ್ಲಿ ಟೆಂಡರ್ ಶ್ಯೂರ್ ರಸ್ತೆಯ ಫುಟ್​ಪಾತ್ ಅತಿಕ್ರಮಣವನ್ನು ಸೋಮವಾರ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಈ ಕುರಿತು ವಿಜಯವಾಣಿ ಜು. 10ರಂದು ವರದಿ ಪ್ರಕಟಿಸಿತ್ತು. ಪಾಲಿಕೆ ವಲಯ ಅಧಿಕಾರಿ ಆನಂದಕುಮಾರ ಝುಳಕಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಫುಟ್​ಪಾತ್ ಅತಿಕ್ರಮಿಸಿ ಹಾಕಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್ ಅನ್ನು ಜೆಸಿಬಿ ಬಳಸಿ ಪುಡಿಗಟ್ಟಲಾಯಿತು. ಸುಮಾರು 2 ಮೀಟರ್ ಅಗಲ ಹಾಗೂ 18 ಮೀಟರ್ ಉದ್ದಕ್ಕೆ ಹಾಕಲಾಗಿದ್ದ ಕಾಂಕ್ರೀಟ್ ನಿರ್ವಣವನ್ನು ಧ್ವಂಸಗೊಳಿಸಿದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು.

ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದಿಂದ ಈ ಅತಿಕ್ರಮಣ ನಡೆದಿತ್ತು. ಫುಟ್​ಪಾತ್​ಗೆ ಹೊಂದಿಕೊಂಡೇ ಕಟ್ಟಡದ ಗೋಡೆ ಎದ್ದು ನಿಂತಿವೆ. ಆದರೆ, ಲೋಪ ಇದಲ್ಲ. ಕಟ್ಟಡದ ಕೆಳ ಮೆಟ್ಟಿಲು ಎತ್ತರವಾಗದಂತೆ ಮಾಡಿರುವ ನಿರ್ಮಾಣ ಫುಟ್​ಪಾತ್ ಅನ್ನು ಅತಿಕ್ರಮಿಸಿತ್ತು. ರಸ್ತೆ ಬದಿ ಫುಟ್​ಪಾತ್ ಜತೆ ಸೈಕಲ್ ಪಾತ್ ನಿರ್ಮಾಣ ಮಾಡಿರುವುದು ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆ. ಆದರೆ, ಇಲ್ಲಿ ಸೈಕಲ್ ಪಾತ್ ಕಾಣಲು ಸಿಗುತ್ತಿರಲಿಲ್ಲ. ಫುಟಪಾತ್​ಅನ್ನೇ ಅರ್ಧದಷ್ಟು ಅತಿಕ್ರಮಿಸಲಾಗಿತ್ತು. ಪೊಲೀಸ್ ಪಾಟೀಲ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದೆ.

‘ಇಲ್ಲಿ ರಸ್ತೆಗೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ಯಾವುದೇ ವ್ಯಾಜ್ಯ ಇಲ್ಲ. ಕೋರ್ಟ್​ನಲ್ಲಿ ಇರುವುದು ಬೇರೆ ಪ್ರಕರಣ. ಫುಟ್​ಪಾತ್ ಅತಿಕ್ರಮಿಸಿ ಹಾಕಲಾಗಿದ್ದ ಸುಮಾರು ಒಂದೂವರೆ ಮೀಟರ್ ಅಗಲ ಹಾಗೂ 18 ಮೀಟರ್ ಉದ್ದದಷ್ಟು ಕಾಂಕ್ರೀಟ್ ನಿರ್ವಣವನ್ನು ತೆರವುಗೊಳಿಸಿದ್ದೇವೆ. ತೆರವು ಕಾರ್ಯಾಚರಣೆಗೆ ತಗುಲಿರುವ 18-20 ಸಾವಿರ ರೂ. ವೆಚ್ಚವನ್ನು ಅತಿಕ್ರಮಣದಾರರಿಂದ ವಸೂಲಿ ಮಾಡುತ್ತೇವೆ’ ಎಂದು ಪಾಲಿಕೆ ವಲಯ ಅಧಿಕಾರಿ ಆನಂದಕುಮಾರ ಝುಳಕಿ ವಿಜಯವಾಣಿಗೆ ತಿಳಿಸಿದ್ದಾರೆ.