ಜಿಲ್ಲೆ

ಫುಟ್‌ಪಾತ್ ವ್ಯಾಪಾರದಿಂದ ಕಿರಿಕಿರಿ

ಮೈಸೂರು: ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗ, ಬೀದಿ ಬದಿ ವ್ಯಾಪಾರದ ತಾಣವಾಗಿ ಪರಿವರ್ತನೆಗೊಂಡಿದೆ. ಇದರಿಂದ ಸಾರ್ವಜನಿಕರು ತಿರುಗಾಡಲು ಕಿರಿಕಿರಿ ಅನುಭವಿಸುವಂತಾಗಿದೆ.

ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ನಿಯಮಗಳು/ಕಾಯ್ದೆಯನ್ನು ಮೈಸೂರು ಮಹಾನಗರ ಪಾಲಿಕೆ ಪಾಲನೆ ಮಾಡುತ್ತಿಲ್ಲ. ಇವರಿಗಾಗಿ ನಿಗದಿತ ಸ್ಥಳ ಗುರುತು ಮಾಡಿಲ್ಲ. ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ದಂಡ ವಸೂಲಿ ಮಾಡಿ ಕ್ರಮ ವಹಿಸುತ್ತಿಲ್ಲ. ಇದರಿಂದಾಗಿ ಬೀದಿ ಬದಿ ವ್ಯಾಪಾರದ ಸಮಸ್ಯೆ ನಗರದಲ್ಲಿ ತೀವ್ರಗೊಂಡಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಅವರ ನೇತೃತ್ವದಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಫುಟ್‌ಪಾತ್ ಒತ್ತುವರಿ ಕುರಿತು ಚರ್ಚೆ ನಡೆಯಿತು. ಫುಟ್‌ಪಾತ್ ಇರುವುದು ಪಾದಚಾರಿಗಳು ತಿರುಗಾಡಲು ಮಾತ್ರ. ಅಲ್ಲಿ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ. ಆದ್ದರಿಂದ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ನಡೆಸುತ್ತಿರುವ ವ್ಯಾಪಾರ, ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸುಭಾಷ್ ಅಡಿ ಅವರು ಪಾಲಿಕೆಗೆ ತಾಕೀತು ಮಾಡಿದ್ದರು. ಬಳಿಕ ಎಚ್ಚೆತ್ತುಕೊಂಡ ಪಾಲಿಕೆ ತೆರವು ಕಾರ್ಯಾಚರಣೆ ನಡೆಸಿತು.

ಕೆಆರ್ ವೃತ್ತ, ದೇವರಾಜ ಮಾರುಕಟ್ಟೆ ಬಳಿ, ಸಯ್ಯಜಿರಾವ್ ರಸ್ತೆಯ ಫುಟ್‌ಪಾತ್ ಮೇಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೆ, ನಗರದ ವಿವಿಧ ವಾಣಿಜ್ಯ ಪ್ರದೇಶಗಳು, ಪ್ರಮುಖ ರಸ್ತೆಗಳಲ್ಲೂ ಹೀಗೆ ಕಾರ್ಯಾಚರಣೆ ನಡೆಸುವುದನ್ನು ಪಾಲಿಕೆ ಮರೆತು ಬಿಟ್ಟಿದೆ. ಉಳಿದ ಕಡೆಯಲ್ಲೂ ಈ ರೀತಿಯ ತೆರವು ಕಾರ್ಯ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪಾಲಿಕೆಯಿಂದ 4,500 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಇವರಿಂದ ನಿಯಮಿತವಾಗಿ ತೆರಿಗೆ ಸಂಗ್ರಹಿಸಲು ಅವಕಾಶವಿದೆ. ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವಂತ್ತಿಲ್ಲ, ರಸ್ತೆ ಬದಿ ಮಾಡಬೇಕು. 4*6 ಅಡಿಯಲ್ಲಿ ವ್ಯಾಪಾರವನ್ನು ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ನಡೆಸಬೇಕು. ನಿಯಮ ಉಲ್ಲಂಘಿಸಿದರೆ 2 ಸಾವಿರ ರೂ. ದಂಡ ಹಾಕಲು ಅವಕಾಶವಿದೆ. ಆದರೆ, ಪಾಲಿಕೆ ಈ ನಿಯಮಗಳನ್ನು ಪಾಲನೆ ಮಾಡದೆ ಬೀದಿ ಬದಿ ಅಂಗಡಿಗಳ ತೆರವಿಗೆ ಮುಂದಾಗಿದೆ. ಇದು ಈ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿದಿ ವ್ಯಾಪಾರಿಗಳು ಅಷ್ಟೇ ಅಲ್ಲ, ಇತರ ವ್ಯಾಪಾರಿಗಳು, ದೊಡ್ಡ ಅಂಗಡಿಯವರು, ಹೋಟೆಲ್‌ನವರು ಸಹ ಫುಟ್‌ಪಾತ್ ಅತಿಕ್ರಮಣ ಮಾಡಿದ್ದಾರೆ. ಶಿವರಾಂಪೇಟೆ, ದೇವರಾಜ ಅರಸು ರಸ್ತೆ, ಧನ್ವಂತ್ರಿ ರಸ್ತೆ, ಕೆಆರ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆ, ವೃತ್ತದಲ್ಲಿ ಫುಟ್‌ಪಾತ್ ಒತ್ತುವರಿ ಈಗಲೂ ಸಾಮಾನ್ಯ ಎನಿಸಿದೆ. ಅಂಗಡಿ, ಮಳಿಗೆ, ಗ್ಯಾರೇಜ್‌ಗೆ ಸಂಬಂಧಿಸಿದ ಒಂದಿಲ್ಲೊಂದು ವಸ್ತು ಪಾದಚಾರಿ ಮಾರ್ಗದಲ್ಲಿ ಇರುತ್ತದೆ. ಇದರಿಂದ ಫುಟ್‌ಪಾತ್‌ನಲ್ಲಿ ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದೆ ರಸ್ತೆಗೆ ಬರುತ್ತಾರೆ. ಆಗ ಅಪಘಾತಗಳು ಸಂಭವಿಸುತ್ತಿವೆ. ವಾಹನ ಸುಗಮ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಇದು ನಿತ್ಯದ ಗೋಳು ಎನ್ನುವಂತಾಗಿದೆ.

ಈ ಸಮಸ್ಯೆಗೆ ಪಾಲಿಕೆ ಶಾಶ್ವತ ಕ್ರಮ ತೆಗೆದುಕೊಳ್ಳಬೇಕು. ಫುಟ್‌ಪಾತ್ ಸಾರ್ವಜನಿಕರ ಓಡಾಟಕ್ಕೆ ಮಾತ್ರ ಮೀಸಲಿರುವಂತೆ ನೋಡಿಕೊಳ್ಳಬೇಕಿದೆ. ನಿಯಮ ಉಲ್ಲಂಘಿಸುವ ಬೀದಿ ಬದಿ ವ್ಯಾಪಾರಿಗಳೊಂದಿಗೆ ದೊಡ್ಡ ವ್ಯಾಪಾರಿಗಳು, ವರ್ತಕರು, ಹೋಟೆಲ್ ಮಾಲೀಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.
ಈ ವಿಷಯದ ಕುರಿತು ಲೌಡ್ ಸ್ಪೀಕರ್‌ನಲ್ಲಿ ಸಂಗ್ರಹಿಸಿರುವ ಸಾರ್ವಜನಿಕರ ಅಭಿಪ್ರಾಯ ಇಲ್ಲಿದೆ.

ನಗರದ ವಿವಿಧೆಡೆ ಪರಿಶೀಲನೆ ನಡೆಸಿ ಫುಟ್‌ಪಾತ್ ಅತಿಕ್ರಮಣವಾಗಿರುವುದನ್ನು ಮನಗಂಡು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಿನದಿಂದ ದಿನಕ್ಕೆ ಫುಟ್‌ಪಾತ್ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ. ಈ ಕಾರಣಕ್ಕೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಗುತ್ತಿದೆ.
ಶಿವಕುಮಾರ್, ಮೇಯರ್


ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಪಾಲಿಕೆಗೆ ಅಧಿಕಾರವಿಲ್ಲ. ನಿಯಮ ಪಾಲನೆ ಮಾಡದ ವ್ಯಾಪಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಎಲ್ಲರಿಗೂ ತೊಂದರೆ ಕೊಡುವುದು ಸರಿಯಲ್ಲ. ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಕಾಯ್ದೆ ಸಹ ಪಾಲನೆ ಆಗುತ್ತಿಲ್ಲ. ಈ ಕಾಯ್ದೆ ಅನ್ವಯ ಕುಂದುಕೊರತೆ ನಿವಾರಣಾ ಸಮಿತಿ ರಚಿಸಿ ನಿಯಮಿತವಾಗಿ ಸಭೆ ನಡೆಸಿಲ್ಲ. ಇಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ತೆರವು ಕಾರ್ಯಾಚರಣೆ ಕೈಗೊಂಡಿರುವ ಪಾಲಿಕೆಯ ಕ್ರಮ ಖಂಡನೀಯ.
ಭಾಸ್ಕರ್ ಶ್ರೀನಿವಾಸ್ ಅರಸ್, ಅಧ್ಯಕ್ಷ, ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ

ಕಾರ್ಯಾಚರಣೆಯ ಮೊದಲ ಹಂತವಾಗಿ ಕೆಲವು ಅಂಗಡಿ ತೆರವುಗೊಳಿಸಲಾಗಿದೆ. ಫುಟ್‌ಪಾತ್ ಅತಿಕ್ರಮಣದಿಂದ ಆಗುವ ತೊಂದರೆ ಬಗ್ಗೆ ಅರಿವು ಸಹ ಮೂಡಿಸಲಾಗುತ್ತಿದೆ. ಆದರೆ, ಇದೇ ರೀತಿ ವ್ಯಾಪಾರ ಮುಂದುವರಿಸಿದರೆ ದಂಡ ವಿಧಿಸಲಾಗುವುದು.
ಡಾ.ನಾಗರಾಜ್, ಆರೋಗ್ಯಾಧಿಕಾರಿ, ನಗರಪಾಲಿಕೆ

ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿದರೆ ಅವರ ಬದುಕು ಬೀದಿಗೆ ಬೀಳಲಿದೆ. ಬಹಳಷ್ಟು ಜನರಿಗೆ ಇದನ್ನು ಬಿಟ್ಟು ಬೇರೆ ಉದ್ಯೋಗ ತಿಳಿದಿಲ್ಲ. ಅವರ ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಕಾನೂನು ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಈ ರೀತಿ ಕ್ರಮ ಕೈಗೊಳ್ಳುವ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಅನಿತಾ ಕುಮಾರಿ, ಸದಸ್ಯೆ, ಪಟ್ಟಣ ವ್ಯಾಪಾರಿಗಳ ಸಮಿತಿ

ಪ್ರಮುಖ ವೃತ್ತ, ರಸ್ತೆಯ ಬದಿ ಫುಟ್‌ಪಾತ್‌ಗಳು ಸ್ಟ್ರೀಟ್‌ಫುಡ್ ಅಂಗಡಿಗಳ ವ್ಯಾಪಾರ ತಾಣವಾಗಿವೆ. ಲಕ್ಷ್ಮೀಪುರಂನ ಆರ್‌ಟಿಒ ವೃತ್ತ, ಸರಸ್ವತಿಪುರಂನ ಜವರೇಗೌಡ ಪಾರ್ಕ್ ಬಳಿ, ಬಲ್ಲಾಳ್ ವೃತ್ತದ ಬಳಿ… ಹೀಗೆ ವಿವಿಧೆಡೆ ತಳ್ಳುವ ಗಾಡಿಗಳು ತಳವೂರಿವೆ. ನಾಮಫಲಕ, ಗ್ರಾಹಕರು ಕುಳಿತುಕೊಳ್ಳುವ ಕುರ್ಚಿಗಳು ಸೇರಿದಂತೆ ಇನ್ನಿತರ ವಸ್ತುಗಳು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿವೆ. ಹೀಗಾದರೆ ಜನರು ಎಲ್ಲಿ ತಿರುಗಾಡಬೇಕು?
ಕೆ.ಎಂ.ಮನೋಜ್, ವಿದ್ಯಾರ್ಥಿ

ಬೀದಿ ಬದಿ ವ್ಯಾಪಾರಿಗಳು ಅಷ್ಟೇ ಅಲ್ಲ, ದೊಡ್ಡ ಅಂಗಡಿಯವರು ಸಹ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ, ಕ್ರಮ ಮಾತ್ರ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಆಗುತ್ತಿದೆ, ಇದು ಸರಿಯಲ್ಲ. ಯಾರೇ ನಿಯಮ ಉಲ್ಲಂಘಿಸಿದರೂ ಅವರೆಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಜತೆಗೆ, ಫುಟ್‌ಪಾತ್ ತೆರವು ಕಾರ್ಯಾಚರಣೆ ಒಂದು ದಿನಕ್ಕೆ ಮಾತ್ರ ಸಿಮೀತವಾಗಬಾರದು. ಅದು ನಿತ್ಯ ನಡೆಯಬೇಕು. ಬೀದಿ ವ್ಯಾಪಾರಿಗಳು ಫುಟ್‌ಪಾತ್ ಮೇಲೆ ಅಂಗಡಿ ಇಡದಂತೆ ನೋಡಿಕೊಳ್ಳಬೇಕು.
ಎಚ್.ಎಂ.ದಿವ್ಯಶ್ರೀ, ವಿದ್ಯಾರ್ಥಿನಿ

ಫುಟ್‌ಪಾತ್ ಒತ್ತುವರಿಯಿಂದ ಜನರು ರಸ್ತೆಗಿಳಿಯುತ್ತಾರೆ. ಪಾದಚಾರಿಗಳು, ವಾಹನಗಳು ಒಟ್ಟೊಟ್ಟಿಗೆ ರಸ್ತೆಯಲ್ಲಿ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ವಾಹನಗಳು ಹಾದಿಹೋಕರಿಗೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸಿರುವ ಅನೇಕ ಉದಾಹರಣೆಗಳಿವೆ. ಆದ್ದರಿಂದ, ಫುಟ್‌ಪಾತ್ ಅತಿಕ್ರಮಣಕ್ಕೆ ಅವಕಾಶ ಕಲ್ಪಿಸಿಕೊಡಬಾರದು.
ಎಸ್.ಕೆ.ಮಂಜುನಾಥ್, ಸಾರ್ವಜನಿಕ

ಫುಟ್‌ಫಾತ್ ಮೇಲಿನ ವ್ಯಾಪಾರಿಗಳು ಸರ್ಕಾರದ ಯಾವ ನಿಯಮಗಳನ್ನೂ ಪಾಲನೆ ಮಾಡಲ್ಲ. ಸ್ಟ್ರೀಟ್‌ಫುಟ್ ಅಂಗಡಿಗಳು ತಯಾರಿಸುವ ಆಹಾರ ಗುಣಮಟ್ಟದಲ್ಲಿ ಇರಲ್ಲ, ಶುಚಿತ್ವ ಕಾಯ್ದುಕೊಳ್ಳಲ್ಲ. ಇದರಿಂದ ಜನರ ಆರೋಗ್ಯ ಹದಗೆಡುತ್ತದೆ. ದರ ಮಾತ್ರ ಹೋಟೆಲ್‌ನಷ್ಟೇ ಇರುತ್ತದೆ. ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಆದರೆ, ಇವರಿಗೆ ಉತ್ತಮ ವ್ಯಾಪಾರವಾಗುತ್ತದೆ.
ದೀಪು, ಕಾರ್ಮಿಕ